ಹಾಸನ : ದಲಿತರ ಮೇಲಿನ ದೌರ್ಜನ್ಯ ಕುರಿತು ಹೆಚ್ಚು ದೂರು ಬಂದಿವೆ. ಅವರ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್‌ಗೌಡ ಅಭಯ ನೀಡಿದರು.
ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಬಂದಾಗ ಸ್ವೀಕರಿಸಿ ಹಂತಹಂತವಾಗಿ ತನಿಖೆ ನಡೆಸಲಾಗುವುದು. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸುಳ್ಳು ದೂರು ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಎಸ್‌ಪಿ ನಂದಿನಿ ಅವರು ಮಾತನಾಡಿ, ಹಿಂದಿನ ಸಭೆಯಲ್ಲಿ ಕೇಳಿಬಂದ ದೂರುಗಳಲ್ಲಿ ಬಹುತೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಠಾಣಾ ಬರಹಗಾರರಿಗೆ ದಲಿತರ ದೌರ್ಜನ್ಯ ತಡೆ ಕುರಿತು ಸಭೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 370ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ತಿಳಿಸಿದರು.
ಹೊಳೆನರಸೀಪುರದ ಡಿವೈಎಸ್ಪಿ ಲಕ್ಷ್ಮೇಗೌಡ ಮಾತನಾಡಿ, ರಾಜಕೀಯ ವ್ಯಕ್ತಿಗಳ ಜೊತೆ ಸೇರಿ ಏನಾದ್ರೂ ಕಾನೂನು ಬಾಹಿರ ಕೆಲಸ ಮಾಡಿರುವ ಬಗ್ಗೆ ಸ್ಪಷ್ಟ ಉದಾಹರಣೆ ಕೊಟ್ಟರೇ ಕ್ರಮ ತೆಗೆದುಕೊಳ್ಳಲು ಇಲಾಖೆಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.