ಹಾಸನ : ವೈಯಕ್ತಿಕವಾಗಿ ಮಾಡಿಕೊಂಡ ಸಾಲವನ್ನು ತೀರಿಸಲಾಗದೇ ವಿದ್ಯಾರ್ಥಿಗಳಿಗೆ ತಲುಪಬೇಕಾದ ಬಹುಮಾನ ಹಣ ಮತ್ತೆ ಸ್ಕಾಲರ್ಶಿಪ್ ಹಣವನ್ನು ಸಾಲದ ರೂಪದಲ್ಲಿ ನೀಡುವ ಮೂಲಕ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ನಗರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಸತೀಶ್ ಎಂಬುವರೇ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಪ್ರೊಬೆಷನರಿ ನೌಕರ.
ಏನಿದು ಪ್ರಕರಣ:
ಅನುಕಂಪದ ಆಧಾರದ ಮೇಲೆ ಕೆಲಸ ಪಡೆದಿರುವ ಸತೀಶ್ ಕಳೆದ ನಾಲ್ಕು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. 2016-17 ಮತ್ತು 2017-18 ಹಾಗೂ 2019ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಸ್ಕಾಲರ್ಶಿಪ್ ಮತ್ತು ಬಹುಮಾನದ ಹಣವನ್ನು ವೈಯಕ್ತಿಕವಾಗಿ ಮಾಡಿದ ಸಾಲವನ್ನು ಮರು ಪಾವತಿ ಮಾಡಲು ವಿದ್ಯಾರ್ಥಿಗಳ ಖಾತೆಗೆ ಹಾಕುವ ಬದಲು, ಸಾಲ ಮಾಡಿದ ವ್ಯಕ್ತಿಗಳ ಖಾತೆಗೆ ಹಾಕುವ ಮೂಲಕ ಹಣ ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿದ್ದಾನೆ.
ತಡವಾಗಿ ಬೆಳಕಿಗೆ ಬಂದ ಪ್ರಕರಣ:
ಪ್ರಕರಣ ನಡೆದು ಮೂರು ವರ್ಷಗಳೇ ಕಳೆದರೂ ಇದುವರೆಗೂ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಮೂರು ವರ್ಷದ ಬಳಿಕ ಕೆಲವು ವಿದ್ಯಾರ್ಥಿಗಳ ಖಾತೆಗೆ ಹಣ ಸಂದಾಯವಾಗದ ಹಿನ್ನೆಲೆಯಲ್ಲಿ ಸ್ಕಾಲರ್ಶಿಪ್ ಹಣವನ್ನು ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಗೆ ಕೆಲವರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಪತಿಯ ವಿರುದ್ಧವೇ ದೂರು ನೀಡಿದ ಪತ್ನಿ:
ಪ್ರಕರಣ ಬೆಳಕಿಗೆ ಬರಲು ಆತ ಮಾಡಿದ್ದ ಒಂದು ಈ ತಪ್ಪು ಈಗ ಆತನ ಕೆಲಸಕ್ಕೆ ಕುತ್ತು ತಂದಿದೆ. ವೈಯಕ್ತಿಕ ಸಾಲವನ್ನು ಮರುಪಾವತಿ ಮಾಡಲು ಹಣವನ್ನು ಬಳಸಿಕೊಂಡಿದ್ದು ಅಷ್ಟೇ ಅಲ್ಲದೇ ಆತನ ಪತ್ನಿಯ ಖಾತೆಗೆ ಹಣವನ್ನು ಜಮೆ ಮಾಡಿದ್ದಾನೆ. ಬಳಿಕ ಪತ್ನಿಗೆ ಬೆದರಿಸಿ ಆಕೆಯ ಬ್ಯಾಂಕ್ ಖಾತೆಯ ಪುಸ್ತಕ ಮತ್ತು ಎಟಿಎಂನ್ನು ಬಲವಂತವಾಗಿ ಆಕೆಯಿಂದ ಪಡೆದುಕೊಂಡು ಹಣ ಡ್ರಾ ಮಾಡಿಕೊಂಡಿದ್ದಾನೆ. ಎಟಿಎಂ ಮತ್ತು ಪಾಸ್ ಪುಸ್ತಕವನ್ನು ಬಲವಂತವಾಗಿ ಪಡೆದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪತ್ನಿ ಬ್ಯಾಂಕ್ ಸ್ಟೇಟ್ಮೆಂಟ್ ಪಡೆದಾಗ ಈತನ ಕೃತ್ಯ ಬಯಲಾಗಿದೆ. ನಂತರ ಆಕೆಯೇ ಸರ್ಕಾರದ ಹಣವನ್ನು ನನ್ನ ಪತಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಬೆಂಗಳೂರಿನ ಆಯುಕ್ತರ ಕಚೇರಿಗೆ ದೂರು ದಾಖಲಿಸಿದ್ದು, ನಿಜಕ್ಕೂ ಪತ್ನಿಯ ಪ್ರಾಮಾಣಿಕತೆಯನ್ನು ಎತ್ತಿತೋರಿಸುತ್ತದೆ.
ಹಣ ದುರುಪಯೋಗವಾಗಿರುವುದು ಸತ್ಯ:
ಹಣ ದುರುಪಯೋಗವಾಗಿರುವುದು ಸತ್ಯ. ಈ ಬಗ್ಗೆ ಈಗಾಗಲೇ ನಾವು ಮೇಲಧಿಕಾರಿಗಳಿಗೆ ಮತ್ತು ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಗಮನಕ್ಕೆ ತಂದಿದ್ದು, ಈತನಿಗೂ ಕೂಡ ನೋಟಿಸ್ ನೀಡಲಾಗಿತ್ತು. ಆದರೆ ಈತ ಕಳೆದ ಐದಾರು ತಿಂಗಳಿನಿಂದ ಕಚೇರಿಗೆ ಬಾರದೆ ಕರ್ತವ್ಯಲೋಪ ಎಸಗಿದ್ದಾನೆ. ಈತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಇದಾಗಲೇ ಹಾಸನ ಸಮಾಜ ಕಲ್ಯಾಣ ಇಲಾಖೆಯಿಂದ ಪತ್ರವನ್ನು ಕೂಡ ನಾವು ಬರೆದಿದ್ದೇವೆ. ಈತ 'ಸಿ' ಗ್ರೂಪ್ ನೌಕರನಾಗಿರುವುದರಿಂದ ಈತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ನನಗೆ ಬರುವುದಿಲ್ಲ. ಆಯುಕ್ತರ ಕಚೇರಿಯಿಂದಲೇ ಈತನಿಗೆ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ. ಆದರೆ ಈತ ಕಳೆದ ಮೂರು ವರ್ಷಗಳಿಂದ ಕಚೇರಿಗೂ ಗೊತ್ತಾಗದಂತೆ ಹಣದುರುಪಯೋಗ ಮಾಡಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ನನಗೆ ಗೊತ್ತಾಗಿದೆ. ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ.
ಕೆಲಸದಿಂದ ವಜಾ ಮಾಡಿದರೆ ನ್ಯಾಯ ಸಿಗುತ್ತದೆ:
ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ವಿದ್ಯಾರ್ಥಿಗಳಿಗೆ ತಲುಪಬೇಕಾದ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ನಿಜಕ್ಕೂ ಖಂಡನಾರ್ಹ. ನಮ್ಮ ಸಂಘಟನೆಯಿಂದನೂ ಕೂಡ ಇಂಥ ಪ್ರಕರಣವನ್ನು ಖಂಡಿಸುತ್ತೇವೆ. ಆದರೆ ಈತ ಇಂತಹ ಕೃತ್ಯವನ್ನು ಮಾಡಬೇಕಾದರೆ ಇಲಾಖೆಯ ಅಧಿಕಾರಿಗಳು ಕೂಡ ಭಾಗಿಯಾಗಿರುತ್ತಾರೆ. ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಉನ್ನತ ತನಿಖೆ ಮಾಡಿ ಈ ಕೃತ್ಯದಲ್ಲಿ ಭಾಗಿಯಾಗಿರುವ ಆತನನ್ನು ಕೆಲಸದಿಂದ ವಜಾಗೊಳಿಸಬೇಕು. ಅಲ್ಲದೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಇಲಾಖೆಯ ಸಿಬ್ಬಂದಿ ಮೇಲೂ ಕೂಡಾ ಶಿಸ್ತುಕ್ರಮ ಜರುಗಿಸಬೇಕು. ಕಚೇರಿಯ ಆಯುಕ್ತರು ಇಂತಹ ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಂತಹವರುಗಳನ್ನ ಕೆಲಸದಿಂದ ವಜಾ ಮಾಡಿದರೆ ಮುಂದೆ ಇಂತಹ ಪ್ರಕರಣಗಳು ಮಾಡುವುದಕ್ಕೂ ನೌಕರರು ಭಯಪಡುತ್ತಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇದರ ವಿರುದ್ಧ ಕ್ರಮ ಜರುಗಿಸದಿದ್ದರೆ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಮಾಡುತ್ತೇವೆ ಎನ್ನುತ್ತಾರೆ ದಲಿತ ಪರ ಸಂಘಟನೆ ಮುಖಂಡ.
ಒಟ್ಟಾರೆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ಅಪರಾಧವೇ ಸರಿ. ಆದರೆ ಮಾಹಿತಿಗಳ ಪ್ರಕಾರ ಈಗ ಸದ್ಯ 4 ಲಕ್ಷ ಮೌಲ್ಯದ ದಾಖಲಾತಿಗಳು ಸಿಕ್ಕಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಈತ ಯಾವ ಯಾವ ವಿದ್ಯಾರ್ಥಿಗಳಿಗೆ ಅವರುಗಳ ಖಾತೆಗೆ ಹಣ ಹಾಕದೇ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಉನ್ನತಮಟ್ಟದ ತನಿಖೆಯಿಂದಲೇ ಹೊರಬರಬೇಕಿದೆ.