ಹಾಸನ: ನಗರದಲ್ಲಿ ಸ್ಯಾನಿಟೈಸರ್ ಯಂತ್ರ ಅಳವಡಿಸುವ ನೆಪದಲ್ಲಿ ರಾಜಕೀಯ ಕೆಸರೆರಚಾಟ ಪ್ರಾರಂಭವಾಗಿದೆಯೇ ಎಂಬ ಅನುಮಾನಗಳು ಶುರುವಾಗಿದೆ.
ಈ ಹಿಂದೆ ಶಾಸಕ ಪ್ರೀತಮ್ ಗೌಡ ತಮ್ಮ ಭಾವಚಿತ್ರ ಇರುವ ಸ್ಯಾನಿಟೈಸರ್ ಯಂತ್ರವನ್ನು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಸರ್ಕಾರಿ ಕಛೇರಿಗಳ ಮುಂದೆ ಇಟ್ಟಿದ್ದರು. ಈ ಬಗ್ಗೆ ಇತರೆ ಪಕ್ಷದವರಿಂದ ಆಕ್ಷೇಪ ಕೂಡ ಕೇಳಿ ಬಂದಿತ್ತು. ಈಗ ಅದೇ ಸ್ಥಳಗಳಲ್ಲಿ ಜೆಡಿಎಸ್ ಮುಖಂಡ ಅಗಿಲೆ ಯೋಗಿಶ್, ನಗರಸಭೆ ಮಾಜಿ ಸದಸ್ಯ ಹೆಚ್.ಬಿ.ಗೋಪಾಲ್, ದಸ್ತಗಿರ್ ಹಾಗೂ ಇತರರು ಯುಜಿಡಿ ಕೆಲಸ ಮಾಡುವ ದಯಾನಂದ್ ಎಂಬವರ ಭಾವ ಚಿತ್ರವಿರುವ ಸ್ಯಾನಿಟೈಸರ್ ಯಂತ್ರವನ್ನು ಪಕ್ಕದಲ್ಲೇ ಇಟ್ಟಿದ್ದಾರೆ.
ಈಗ ಇಡಲಾಗಿರುವ ಸ್ಯಾನಿಟೈಸರ್ ಯಂತ್ರ ಯುಜಿಡಿ ಕೆಲಸ ಮಾಡುವ ದಯಾನಂದ್ ಅವರು ಸ್ವಯಂ ಪ್ರೇರಿತವಾಗಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಜೆಡಿಎಸ್ ಪಕ್ಷದ ಮುಖಂಡರು ಇದನ್ನು ಅಳವಡಿಸಿರುವುದರಿಂದ ಜೆಡಿಎಸ್-ಬಿಜೆಪಿ ನಡುವೆ ಸ್ಯಾನಿಟೈಸರ್ ರಾಜಕೀಯ ನಡೆಯುತ್ತಿದ್ಯಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಈ ಮೊದಲು ಶಾಸಕರು ಅಳವಡಿಸಿದ್ದ ಯಂತ್ರದಲ್ಲಿ ಕೇಸರಿ ಬಣ್ಣದಲ್ಲಿ ಸ್ಟಿಕ್ಕರ್ ಅಂಟಿಸಲಾಗಿತ್ತು, ಆದರೆ ಹೊಸ ಯಂತ್ರದ ಸ್ಟಿಕ್ಕರ್ ಹಸಿರು ಬಣ್ಣದಲ್ಲಿದೆ.
ಈ ಬಗ್ಗೆ ಮಾತನಾಡಿರುವ ಸ್ಯಾನಿಟೈಸರ್ ಯಂತ್ರದ ಪ್ರಾಯೋಜಕ ದಯಾನಂದ್, ನಾನು ಯುಜಿಡಿ ಕೆಲಸ ಮಾಡುತ್ತೇನೆ. ಕೆಲಸ ಮುಗಿದ ಮೇಲೆ ಪಾರ್ಟ್ ಟೈಂ ಚಾಲಕನಾಗಿ ದುಡಿಯುತ್ತೇನೆ. ಸಮಾಜಸೇವೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಬರುವವರಿಗೆ ಉಪಯೋಗವಾಗಲು ಸ್ಯಾನಿಟೈಸರ್ ಯಂತ್ರ ಇಡಲಾಗಿದೆ. ಒಂದು ಯಂತ್ರ ಇರುವುದರಿಂದ ಹೆಚ್ಚಿನ ಜನ ಬಂದಾಗ ಕಾಯಬೇಕಾಗಿತ್ತು, ಹಾಗಾಗಿ ಇನ್ನೊಂದು ತಂದು ಇಡಲಾಗಿದೆ ಎಂದು ತಿಳಿಸಿದ್ದಾರೆ.