ಹಾಸನ: ಇದ್ದಕ್ಕಿದ್ದಂತೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯೆಗೆ ಧನ್ಯವಾದ ತಿಳಿಸಿದ್ದಾರೆ.
ಚಿಕಿತ್ಸೆ ಪಡೆದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಇದ್ದಕ್ಕಿದ್ದಂತೆ ಬೆಳಗ್ಗೆ ತಿಂಡಿ ತಿಂದ ಬಳಿಕ ಹೊಟ್ಟೆನೋವು ಮತ್ತು ಭೇದಿ ಕಾಣಿಸಿಕೊಂಡಿತು. ಹೆತ್ತ ಮಗನಿಗಿಂತಲೂ ಹೆಚ್ಚಾಗಿ ಪ್ರೀತಿಸುವ ನನ್ನ ಮಗ ಉಮೇಶ್ ಬಳ್ಳೂರು ತಕ್ಷಣ ನನ್ನ ಕರೆ ತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಮೊದಲಿನಿಂದಲೂ ನನಗೆ ಚಿಕಿತ್ಸೆ ನೀಡಿದ ವೈದ್ಯೆ ಪರಿಚಯವಿದ್ದು, ನನಗೆ ಹೀಗಾಯಿತಲ್ಲ ಎಂದು ವೈದ್ಯರಿಗೂ ನೋವಿದೆ. ಆದರೆ ಈಗ ನಾನು ಚಿಕಿತ್ಸೆ ಪಡೆದು ಚೆನ್ನಾಗಿದ್ದೇನೆ. ಚಿಕಿತ್ಸೆಗೆ ಕರೆ ತಂದ ಮತ್ತು ಚಿಕಿತ್ಸೆ ನೀಡಿದ ಇಬ್ಬರೂ ಕೂಡ ನೂರು ಕಾಲ ಚೆನ್ನಾಗಿ ಬಾಳಬೇಕು ಎಂದರು.
ನಂತರ ಮಾತನಾಡಿದ ಆಸ್ಪತ್ರೆಯ ವೈದ್ಯೆ ಡಾ. ಸೌಮ್ಯ ಮಣಿ, ವಯೋಸಹಜ ಇಂಥ ಕಾಯಿಲೆಗಳು ಬರುವುದು ಸಹಜ. ಸಾಲು ಮರದ ತಿಮ್ಮಕ್ಕ ನಾವು ನೀಡಿದ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ದಾಖಲಾದ 2 ಗಂಟೆಯಲ್ಲಿ ಚೇತರಿಸಿಕೊಂಡಿದ್ದು ನಿಜಕ್ಕೂ ಆಶ್ಚರ್ಯ. ಸದ್ಯ ಯಾವುದೇ ಅಂತಹ ದೊಡ್ಡ ಕಾಯಿಲೆ ಇಲ್ಲ. ಕರುಳುಬೇನೆ ಕಾಣಿಸಿಕೊಂಡಿರುವುದು ಸತ್ಯ ಮತ್ತು ಕೆಲವು ಆಹಾರ ಸೇವಿಸಿದಾಗ ಇಂತಹ ವ್ಯತ್ಯಾಸವಾಗುವುದು ಸಹಜ. ತಕ್ಷಣ ಚಿಕಿತ್ಸೆಗೆ ಒಳಪಡಿಸಿದರೆ ಯಾವುದೇ ತೊಂದರೆ ಇಲ್ಲ. ಭಾನುವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತೇವೆ ಎಂದರು.