ಹಾಸನ: ಪದ್ಮಶ್ರೀ ಮತ್ತು ಪರಿಸರ ಪ್ರಶಸ್ತಿ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅನಾರೋಗ್ಯದಿಂದ ಬಳಲುತ್ತಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದು ಮರಳಿದ್ದಾರೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಬೇಲೂರು ತಾಲೂಕಿನ ಬಳ್ಳೂರಿನಲ್ಲಿಯೇ ಉಳಿದಿರುವ ಸಾಲು ಮರದ ತಿಮ್ಮಕ್ಕ ಅನಾರೋಗ್ಯಕ್ಕೆ ಒಳಗಾಗಿ ಹಾಸನದ ಸಂಪಿಗೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದರು. ಹೊಟ್ಟೆನೋವು ಮತ್ತು ತೀವ್ರ ಶ್ವಾಸಕೋಶದ ಸಮಸ್ಯೆಯಿಂದ ಬಳಲಿದ್ದ ಇವರಿಗೆ ಸತತ 2 ಗಂಟೆಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
108 ವರ್ಷ ವಯಸ್ಸಿನ ಸಾಲು ಮರದ ತಿಮ್ಮಕ್ಕ ಪ್ರತಿನಿತ್ಯ ರಾಗಿಯಿಂದ ಮಾಡಿದ ಆಹಾರವನ್ನ ಬಿಟ್ಟರೆ ಬೇರೆ ಯಾವುದೇ ಆಹಾರವನ್ನ ಸೇವಿಸುವುದಿಲ್ಲ. ಮನೆಯಲ್ಲಿ ತಿಂಡಿ ತಿಂದ ಬಳಿಕ 2 ಬಾರಿ ವಾಂತಿ ಮಾಡಿಕೊಂಡಿದ್ದಾರೆ. ಇದರಿಂದ ಕೆಲಕಾಲ ಸುಸ್ತಾದ ಅವರಿಗೆ ತಕ್ಷಣ ಬೇಲೂರಿನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.
ವಾಂತಿಯಾಗುತ್ತಿದ್ದ ಹಿನ್ನಲೆಯಲ್ಲಿ ವೈದ್ಯರು ಗ್ಲೂಕೋಸ್ ಮತ್ತು ರೋಗ ನಿರೋಧಕ ಚುಚ್ಚುಮದ್ದು ನೀಡಿದ್ದು, 2 ಗಂಟೆಯ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ತಿಮ್ಮಕ್ಕ ಅವರ ಆಪ್ತ ಸಹಾಯಕ ಉಮೇಶ್ ಬಳ್ಳೂರು ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದರು. ಬೆಂಗಳೂರಿನಿಂದ ಶಿವರಾತ್ರಿಗೆಂದು ಹಾಸನಕ್ಕೆ ಭೇಟಿ ನೀಡಿದ್ದ ಇವರು ಲಾಕ್ ಡೌನ್ನಿಂದ ಮತ್ತೆ ಬೆಂಗಳೂರಿಗೆ ಹೋಗಲು ಸಾಧ್ಯವಾಗದೇ ಇಲ್ಲಿಯೇ ಉಳಿದಿದ್ದರು.