ಹಾಸನ : ಇಬ್ಬರು ಹುಡುಗಿಯರನ್ನು ಪ್ರೀತಿಸಿ ಕೊನೆಗೆ ತನಗಾಗಿ ವಿಷ ಕುಡಿದ ಹುಡುಗಿಯನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಪ್ರೇಮ ಪ್ರಕರಣ ಸುಖಾಂತ್ಯ ಕಂಡ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಯುವಕನೋರ್ವ ಏಕಕಾಲದಲ್ಲಿ ಇಬ್ಬರು ಹುಡುಗಿಯರನ್ನು ಲವ್ ಮಾಡುತ್ತಿದ್ದ. ಆದರೆ, ಒಬ್ಬಳನ್ನು ಪ್ರೀತಿಸುವುದು ಇನ್ನೊಬ್ಬಳಿಗೆ ಗೊತ್ತಾಗದಂತೆ ಗೌಪ್ಯತೆ ಕಾಪಾಡಿಕೊಂಡಿದ್ದ. ಇತ್ತೀಚೆಗೆ ಯುವಕನ ಕಳ್ಳ ಪ್ರೀತಿ ಬಟಾ ಬಯಲಾಗಿತ್ತು. ಪ್ರೇಮಿಯ ಮೋಸದಾಟ ತಿಳಿದರೂ ಸಹ ಇಬ್ಬರು ಯುವತಿಯರು ಆತನನ್ನ ಪಡೆಯಲು ಪೈಪೋಟಿಗೆ ಬಿದ್ದರು. ನನ್ನನ್ನೇ ನೀನು ಮದುವೆಯಾಗಬೇಕು ಎಂದು ಪಟ್ಟು ಹಿಡಿದರು. ಇದು ಪ್ರಿಯಕರನಿಗೆ ನುಂಗಲಾರದ ತುತ್ತಾಯಿತು.
ಅಂದುಕೊಂಡಿದ್ದು ಒಂದು, ಆಗಿದ್ದು ಇನ್ನೊಂದು ಎಂದು ಕಣ್ ಕಣ್ ಬಿಡಲಾರಂಭಿಸಿದ ಯುವಕ. ಇದನ್ನು ಗಮನಿಸಿದ ಮೂವರ ಕುಟುಂಬಸ್ಥರು ಹಾಗೂ ಊರಿನ ಕೆಲ ಹಿರಿಯರು ಸೇರಿ ತ್ರಿಕೋನ ಪ್ರೇಮಕತೆಗೊಂದು ಅಂತ್ಯ ಹಾಡಲು ಮುಂದಾದರು. ಆದರೆ, ಎಷ್ಟೇ ಪ್ರಯತ್ನ ಮಾಡಿದರೂ, ನನ್ನನ್ನೇ ಮದುವೆಯಾಗಬೇಕು ಎಂದು ಒಬ್ಬಳು, ಇಲ್ಲ ನನ್ನನ್ನೇ ವಿವಾಹವಾಗಬೇಕು ಎಂದು ಇನ್ನೊಬ್ಬಳು ಹಠಕ್ಕೆ ಬಿದ್ದರು.
ಈ ಬೆಳವಣಿಗೆಯಿಂದ ಮನನೊಂದ ಒಬ್ಬಳು ಯುವತಿ ವಿಷ ಕುಡಿದು ಬಿಟ್ಟಳು. ಅದೃಷ್ಟವಶಾತ್ ಬದುಕುಳಿದಳು. ಇಷ್ಟೆಲ್ಲಾ ಆದ ಬಳಿಕ, ಮತ್ತೊಮ್ಮೆ ಪಂಚಾಯ್ತಿ ನಡೆಸಿ ಮುಕ್ತಿ ಹಾಡಲೇಬೇಕೆಂದು ನಿರ್ಧರಿಸಿದ ಹಿರಿಯರು, ನೋಡ್ರಮ್ಮಾ, ಇದು ಕಡೇ ಅವಕಾಶ. ನಿಮ್ಮ ಅಂತಿಮ ನಿರ್ಧಾರ ಏನೆಂದು ಹೇಳಿ ಎಂದರು. ಆಗಲೂ ಇಬ್ಬರು ಒಂದು ಗಂಟೆಯಾದರೂ ಪ್ರೀತಿಸಿದವನೇ ನಮ್ಮ ಗಂಡನಾಗಬೇಕು ಎಂಬ ಬೇಡಿಕೆ ಮುಂದಿಟ್ಟು ಕುಳಿತರು.
![sakaleshwapura-triangle-love-story](https://etvbharatimages.akamaized.net/etvbharat/prod-images/12969503_thu.jpg)
ಈ ಬೆಳವಣಿಗೆ ಕಂಡ ಊರಿನವರು ಸಾಕಪ್ಪಾ ಸಾಕು, ಈ ಪ್ರೀತಿಯ ಹುಚ್ಚಾಟ ಎಂದು ಅಕ್ಷರಶಃ ಹೈರಾಣಾದರು. ಇಷ್ಟಾದರೂ ಕದ್ದುಮುಚ್ಚಿ ಇಬ್ಬರನ್ನೂ ಪ್ರೀತಿ ಮಾಡಿದ ಲವರ್ ಬಾಯ್ ಮಾತ್ರ ಎಲ್ಲವನ್ನೂ ಮೌನವಾಗಿಯೇ ನೋಡುತ್ತಿದ್ದ. ಕಡೆಗೆ ಶುಕ್ರವಾರ ಒಂದು ತೀರ್ಮಾನಕ್ಕೆ ಬಂದ ಸ್ಥಳೀಯರು, ನೀವು ಆಡಿದಂತೆ ನಾವೂ ಆಡೋಕೆ ಆಗಲ್ಲ, ಹುಡುಗ ಯಾರನ್ನು ಮದುವೆಯಾಗಬೇಕು ಎಂದು ಟಾಸ್ (ಹೆಡ್ ಅಂಡ್ ಟೈಲ್) ಹಾಕುತ್ತೇವೆ. ನಿಮ್ಮಿಬ್ಬರಲ್ಲಿ ಯಾರು ಗೆಲ್ಲುತ್ತೀರೋ ಅವರನ್ನು ಪ್ರಿಯಕರನ ಜೊತೆ ಮದುವೆ ಮಾಡುತ್ತೇವೆ ಎಂದರು.
ಇದಕ್ಕೂ ಮುನ್ನ ಮೂವರೂ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆದು ಸಹಿ ಮಾಡಬೇಕು. ಯಾರೇ ಮದುವೆಯಾದರೂ ಒಪ್ಪಿಕೊಳ್ಳಬೇಕು. ನಂತರದಲ್ಲಿ ತಕರಾರು ತೆಗೆದು ಪೊಲೀಸ್ ಠಾಣೆ ಮೊದಲಾದ ಕಡೆಗಳಲ್ಲಿ ದೂರು-ದುಮ್ಮಾನ ಹೇಳಲು ಹೋಗಬಾರದು ಎಂಬ ಷರತ್ತು ವಿಧಿಸಿದರು. ಪ್ರೀತಿಯ ಅದೃಷ್ಟ ಪರೀಕ್ಷೆಗಿಳಿದ ಯುವತಿಯರು ಕಡೆಗೂ ಓಕೆ ಎಂದರು. ಆದರೆ, ಇನ್ನೇನು ಟಾಸ್ ಚಿಮ್ಮಬೇಕು ಎನ್ನುವಷ್ಟರಲ್ಲಿ, ಅಲ್ಲೀವರೆಗೂ ಮೂಖನಾಗಿದ್ದ ಪ್ರಿಯಕರ ಓಡಿ ಹೋಗಿ ನೀನೇ ಬೇಕೆಂದು ವಿಷ ಕುಡಿದಿದ್ದ ಯುವತಿಯನ್ನು ಆಲಂಗಿಸಿಕೊಂಡು, ಇವಳನ್ನೇ ಮದುವೆಯಾಗುತ್ತೇನೆ ಎಂದು ಬಿಟ್ಟ.
![sakaleshwapura-triangle-love-story](https://etvbharatimages.akamaized.net/etvbharat/prod-images/12969503_thume.jpg)
ಈ ಬೆಳವಣಿಗೆ ಕಂಡ ಮತ್ತೊಬ್ಬ ಯುವತಿ ಪ್ರೀತಿಸಿದ್ದವನಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಹೊರಟಳು. ಹಲವು ದಿನಗಳಿಂದ ಕಗ್ಗಂಟಾಗಿದ್ದ ಪ್ರೇಮ ಪುರಾಣ ಇಷ್ಟು ಸುಲಭವಾಗಿ ಬಗೆಹರಿದಿದ್ದನ್ನು ಕಂಡ ಪಂಚಾಯ್ತಿದಾರರು, ಒಂದು ಕ್ಷಣ ಆಶ್ಚರ್ಯ ಚಕಿತರಾದರು. ಆದರೂ ತ್ರಿಕೋನ ಪ್ರೇಮಕತೆ ಸುಖಾಂತ್ಯ ಕಂಡಿತಲ್ಲ, ಮುಂದಿನದು ಅವರಿಗೆ ಬಿಟ್ಟಿದ್ದು ಎಂದು ಅಲ್ಲಿಂದ ನಡೆದರು.
ಯಾವುದೇ ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕ ಆಕರ್ಷಣೆಯಿಂದ ಮೂಡುವ ಅದಮ್ಯ ಭಾವನೆಯೇ ಪ್ರೇಮ. ಇದು ಎರಡು ಮನಸ್ಸುಗಳನ್ನು ಬೆಸೆಯುವ ಭಾವ ಬಂಧ. ಒಂದು ಅಮೂರ್ತ ಪರಿಕಲ್ಪನೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮದ ಸ್ವರೂಪವೇ ಬದಲಾಗಿದೆ ಎಂಬುದಕ್ಕೆ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರುವ ಸಿನಿಮಾವನ್ನೂ ಮೀರಿಸುವ, ವಿಚಿತ್ರ ಪ್ರೇಮ ಪುರಾಣ ನಿಜಕ್ಕೂ ನಗೆ ತರಿಸುವಂತಿದೆ.