ಹಾಸನ: ತಾಲೂಕಿನಲ್ಲಿ ಸೋಮವಾರ ನಡೆದ ಮೂರು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಮೃತಪಟ್ಟು, ಆರು ಜನ ಗಾಯಗೊಂಡಿದ್ದಾರೆ.
ಹಾಸನ ರಸ್ತೆಯ ಸಂಕೇನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಬೇಲೂರಿನಿಂದ ಬರುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಮೂಡಿಗೆರೆಗೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಜಾನಕಮ್ಮ (70) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತರ ಮೊಮ್ಮಗಳಾದ ತುಜುಶ್ರೀ (3) ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನು ಕಾರು ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಮೃತ ಮಹಿಳೆ ಯಸಳೂರು ಹೋಬಳಿ ದೊಡ್ಡಕುಂದೂರು ಗ್ರಾಮದವರು ಎಂದು ಸಿಪಿಐ ಸಿದ್ದರಾಮೇಶ್ವರ ತಿಳಿಸಿದರು. ಮೂಡಿಗೆರೆಗೆ ಸಂಬಂಧಿಕರೊಬ್ಬರ ಸಾವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಬೈಕ್‌ಸವಾರ ಸಾವು:
ಅರೇಹಳ್ಳಿ ಸಮೀಪದ ಲಿಂಗಾಪುರ ಗ್ರಾಮದ ಬಳಿ ಬೈಕ್ ಹಾಗೂ ರಸ್ತೆ ಸಾರಿಗೆ ಸಂಸ್ಥೆ ಬಸ್ ನಡುವೆ ಮಧ್ಯಾಹ್ನ 12.30ರಲ್ಲಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ತಗರೆ ಗ್ರಾಮದ ಯುವರಾಜ್ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮೂಡಿಗೆರೆ ರಸ್ತೆಯ ನವಿಲಹಳ್ಳಿ ಗ್ರಾಮದ ಗಡಿಯಲ್ಲಿ ಬೈಕ್ ಹಾಗೂ ಓಮ್ನಿ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್‌ನಲ್ಲಿ ಬರುತ್ತಿದ್ದ ಗೀತಾ, ಮೇಘ ಹಾಗೂ ದೇವರಾಜ್ ಗಾಯಗೊಂಡಿದ್ದಾರೆ.
ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಲೂರು ಹಾಗೂ ಅರೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾತ್ಕಾಲಿಕ ಪರಿಹಾರ: ರಸ್ತೆ ಸಾರಿಗೆ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಾತ್ಕಾಲಿಕವಾಗಿ ಪರಿಹಾರದ ರೂಪದಲ್ಲಿ 5 ಸಾವಿರ ರೂ. ನೀಡಲಾಗಿದೆ. ಸೂಕ್ತ ದಾಖಲೆಗಳ ನೀಡಿದ ನಂತರ 35 ಸಾವಿರ ರೂ. ನೀಡಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ. ಪರಿಹಾರ ವಿತರಣೆ ಸಂದರ್ಭ ಸೂಪರ್‌ವೈಸರ್ ಉಮೇಶ್, ಡಿಪೋ ಮೇನೇಜರ್ ಬೈರೇಗೌಡ ಇದ್ದರು.