ಹಾಸನ: ಸಿಬಿಐ ನವರು ಚುನಾವಣೆ ಸಮಯದಲ್ಲಿ ನಮ್ಮ ಬೆಂಬಲಿಗರ ಮನೆ ಮೇಲೂ ದಾಳಿ ಮಾಡಿದ್ದಾರೆ. ಒಂದು ಪಕ್ಷವನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿದ್ದಾರೆ. ಅದು ಅವರ ಕರ್ತವ್ಯ ಅವರು ಮಾಡಿಕೊಳ್ತಾರೆ ನಾನ್ಯಾಕೆ ರಿಯಾಕ್ಟ್ ಮಾಡಬೇಕು, ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಕಳೆದ ಬಾರಿ ಮಂಡ್ಯ, ಹಾಸನ ಮತ್ತು ತುಮಕೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಮತ್ತು ಬೆಂಬಲಿಗರ ಮನೆ ಮೇಲೆ ದಾಳಿ ಮಾಡಿದ್ದರು. ಎರಡು ಪಕ್ಷಗಳಿಗೆ ಜೆಡಿಎಸ್ ಕಂಡರೆ ಭಯವಿದೆ. ದೇವೇಗೌಡರು ತಳಮಟ್ಟದಿಂದ ಬಂದ ನಾಯಕರು. ದೇಶಕ್ಕೆ ಇಂತಹ ಪರಿಸ್ಥಿತಿ ದೊಡ್ಡೋರು ನೋಡಿದಾಗ ಕಣ್ಣೀರು ಬರುತ್ತೆ. ಹೆಚ್.ಡಿ.ಡಿ ಅವರು ಹತ್ತೂವರೆ ತಿಂಗಳಲ್ಲಿ ನೀರಾವರಿಗೆ ಹೆಚ್ಚು ಅನುದಾನ ನೀಡಿದ್ದರು ಎಂದರು.
ಸಾವಿರಾರು ಶಾಲೆ - ಕಾಲೇಜು ಮಾಡೋಕೆ ಕುಮಾರಸ್ವಾಮಿ ಬರಬೇಕಾ?. ಅದನ್ನು ಮುಚ್ಚುವಾಗ ಸ್ಥಳೀಯರ, ಶಿಕ್ಷಕರ ಮಾಹಿತಿ ಪಡೆಯಬೇಕು. ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಪೊಲೀಸರಿಂದಲೇ ಲಂಚ ಪಡೆಯುವ ಸರ್ಕಾರವನ್ನು ಇದೇ ಮೊದಲ ಬಾರಿಗೆ ನೋಡಿರೋದು ಎಂದು ವ್ಯಂಗ್ಯವಾಡಿದರು.
ಅನುದಾನ ಕೊಡದಿದ್ದರೇ 1-2 ವರ್ಷ ಕಾಮಗಾರಿ ನನೆಗುದಿಗೆ ಬೀಳುತ್ತೆ. ನಂತರ ಕಾಮಗಾರಿ ಮಾಡಿಸೋದು ನನಗೆ ಗೊತ್ತು. ನಗರಪಾಲಿಕೆ ವಿಚಾರದಲ್ಲಿ ಬಿಜೆಪಿಗೆ ನಾಚಿಕೆಯಾಗಬೇಕು. 25 ಹಳ್ಳಿಗಳ ಸೇರ್ಪಡೆಗೆ ಹಿಂದೆ ಯಾರು ಶ್ರಮ ಹಾಕಿದ್ದಾರೆ ಎಂದು ತಿಳಿಯಲಿ ಎಂದು ಬಿಜೆಪಿ ನಾಯಕರ ವಿರುದ್ಧ ಟಾಂಗ್ ನೀಡಿದರು.
ಅಧಿಕಾರಿಗಳು ಕಾನೂನು ಬಾಹಿರವಾಗಿ ಕೆಲಸ ಮಾಡ್ತಿದ್ದಾರೆ ಮುಂದಿನ ದಿನದಲ್ಲಿ ಅನುಭವಿಸುತ್ತೀರಾ. ಮನೆ ವಿಚಾರದಲ್ಲಿ ಕಾನೂನು ಬಾಹಿರವಾಗಿ ಕಟ್ಟಿಸಿಕೊಡಲು ಮುಂದಾಗಿದ್ದಾರೆ. ನಗರದ ಮಕ್ಕಳ ಉದ್ಯಾನದ ಹಣವನ್ನು ಬೇರೆ ಕಾಮಗಾರಿಗೆ ಹಾಕಿದ್ದಾರೆ ಎಂದು ಕಿಡಿಕಾರಿದರು.
ಇನ್ನೂ ಮುಂದಕ್ಕೆ ದುಡ್ಡು ಮಾಡೋ ಅಧಿಕಾರಿಗಳನ್ನು ತಂದು ಹಾಕುತ್ತಾರೆ. ಹಾಸನಕ್ಕೆ ಡ್ಯಾಮೇಜ್ ಆಗಿರೋ ಸರ್ಕಾರಕ್ಕೆ ದುಡ್ಡು ಕಲೆಕ್ಷನ್ ಮಾಡಲು ಎಕ್ಸ್ ಪರ್ಟ್ ಆಗಿರೋ ಅಧಿಕಾರಿಗಳನ್ನು ಇಲ್ಲಿಗೆ ಹಾಕ್ತಾರೆ. ಎಕ್ಸ್ಪೈರ್ ಆಗಿರೋ ಎಂಜಿನ್ಗಳನ್ನು ತಂದು ಇಲ್ಲಿಗೆ ಹಾಕ್ತಾರೆ ಎಂದು ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.