ಹಾಸನ : ಸಾಮಾಜಿಕ ಅಂತರ ಕಾಪಾಡಿಕೊಂಡು ನಿಬಂಧನೆಗಳೊಂದಿಗೆ ಸೋಮವಾರದಿಂದ ವೆಜ್-ನಾನ್‌ವೆಜ್ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಬಾಗಿಲು ತೆಗೆಯಲು ಅವಕಾಶ ನೀಡಿರುವುದಾಗಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು.
ನಗರಸಭೆಯ ಕುವೆಂಪು ಸಭಾಂಗಣದಲ್ಲಿ ನಡೆದ ಕ್ಯಾಂಟೀನ್, ಹೋಟೆಲ್ ಮತ್ತು ರೆಸ್ಟೋರೆಂಟ್ ಪುನಾರಂಭ ಮಾಡುವ ಹಿನ್ನೆಲೆಯಲ್ಲಿ ಅರಿವು ಮೂಡಿಸಲು ಕರೆಯಲಾಗಿದ್ದ ಮಾಲೀಕರ ಸಭೆಯಲ್ಲಿ ನಗರಸಭೆ ಆಯುಕ್ತರ ಕೃಷ್ಣಮೂರ್ತಿ ಈ ತೀರ್ಮಾನ ಕೈಗೊಂಡಿದ್ದಾರೆ.
ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಭಿನಂದನ್ ಮಾತನಾಡಿ, ಸೋಮವಾರದಿಂದ ಹೋಟೆಲ್ ಬಾಗಿಲು ತೆಗೆಯಲು ಅವಕಾಶ ಕೊಟ್ಟಿರುವುದನ್ನ ಸ್ವಾಗತಿಸುತ್ತೇವೆ. ಇಲ್ಲಿಗೆ ಬರುವ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತೇವೆ. ಗ್ರಾಹಕರಿಗೆ ಬಿಸಿನೀರು ನೀಡುವುದು, ಸ್ವಾನಿಟೈಸರ್ ಸೇರಿ ಆದಷ್ಟು ಎಚ್ಚರಿಕೆ ಕ್ರಮಕ್ಕೆ ನಾವೆಲ್ಲರೂ ಬದ್ಧರಾಗಬೇಕು ಎಂದರು.
ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಈಗಾಗಲೇ ಕೋವಿಡ್-19 ಲಾಕ್ಡೌನ್ ಹಂತ ಹಂತವಾಗಿ ಮುಗಿಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಹೋಟೆಲ್ಗಳು ಸೋಮವಾರದಿಂದ ಪ್ರಾರಂಭವಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಯಾವ ಯಾವ ಕ್ರಮ ಅನುಸರಿಸಬೇಕು ಎಂಬುದರ ಬಗ್ಗೆ ತಿಳಿಸಲು ಸಭೆ ಕರೆಯಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರ ಮಾಡಲು ಇನ್ನೂ ಅನುಮತಿ ನೀಡಿಲ್ಲ. ಅವರಿಗೆ ಸ್ಥಳ ಗುರುತಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ರಸ್ತೆ ಬದಿ ಎಲ್ಲೆಲ್ಲಿ ಗಾಡಿಯನ್ನು ಹಾಕಿಕೊಂಡು ವ್ಯಾಪಾರ ಮಾಡಬೇಕು ಎಂಬುದನ್ನು ತಿಳಿಸಲಾಗುವುದು ಎಂದರು.