ಹಾಸನ: ದೇವೇಗೌಡರಿಗೆ 60 ವರ್ಷ ರಾಜಕೀಯ ಶಕ್ತಿ ತುಂಬಿದ ದಂಡಿಗನಹಳ್ಳಿ ಹೋಬಳಿ ಜನತೆ ಅವರ ಬೆನ್ನೆಲುಬಿಗೆ ನಿಲ್ಲಲಿಲ್ಲ ಎಂದಿದ್ದರೆ ದೇವೇಗೌಡರ ಕುಟುಂಬ ಮೈಸೂರು ಅರಮನೆ ಮುಂದೆ ಜಟಕಾ ಕುದುರೆ ಹೊಡೆಯಬೇಕಿತ್ತು ಎಂದು ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ರವೀಶ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಜನತೆ ದೇವೇಗೌಡರ ಕುಟುಂಬಕ್ಕೆ ರಾಜಕೀಯ ಶಕ್ತಿ ತುಂಬಿದೆ. ಇದೀಗ ಸಚಿವ ಹೆಚ್.ಡಿ.ರೇವಣ್ಣ ಮತ್ತು ಮಗ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕುಟುಂಬಗಳ ಮೇಲೆ ಉದ್ದೇಶಪೂರ್ವಕವಾಗಿಯೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳದೆ ಚುನಾವಣೆ ಹಿನ್ನೆಲೆಯಲ್ಲಿ ಮೂರನೇ ಹಂತದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಕೊಟ್ಟಿದ್ದಾರೆ. ಹೋಬಳಿಗೆ ಹನಿ ನೀರು ಕೊಟ್ಟಿಲ್ಲ. ಅವರ ಕುಟುಂಬ ದಂಡಿಗನಹಳ್ಳಿ ಹೋಬಳಿ ಜನತೆಯ ಪಾದ ತೊಳೆದು ನೀರು ಕುಡಿದರೂ ಪುಣ್ಯ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡ್ರಿಗೆ ತೆಂಗಿನ ಮರಗಳೇ ಇರಲಿಲ್ಲ. ಪಡವಲಹಿಪ್ಪೆಯಲ್ಲಿ ತೆಂಗಿನ ತೋಟ ಮಾಡಿಕೊಂಡಿದ್ದಾರೆ. ಇವತ್ತು ಹೋಬಳಿಯಲ್ಲಿ 500 ಕೊಳವೆ ಬಾವಿಗಳಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ತೆಂಗಿನ ಮರಗಳೆಲ್ಲ ಒಣಗಿವೆ. ಕಳೆದ 20 ವರ್ಷಗಳಿಂದ ಹನಿ ನೀರು ಕೊಡದೆ ಚುನಾವಣೆ ಹಿನ್ನೆಲೆಯಲ್ಲಿ ಕಾಚೇನಹಳ್ಳಿಯ ಮೂರನೇ ಹಂತದ ಏತ ನೀರಾವರಿ ಯೋಜನೆಗೆ ಆಲಂಗೊಂಡನಹಳ್ಳಿ ಎಂದು ಮರುನಾಮಕರಣ ಮಾಡಿದ್ದಾರೆ. ದುರುದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಇವರು ಮೀನಾಮೇಷ ಏಣಿಸುತ್ತಿದ್ದಾರೆ ಎಂದು ದೂರಿದರು.