ಹಾಸನ: ಜಿಲ್ಲೆಯ ವಿವಿಧೆಡೆ ಸುರಿದ ಜಿಟಿಜಿಟಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತವಾಗಿ ವಾಹನ ಸವಾರರಿಗೆ ತೊಂದರೆಯಾಯಿತು. ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯಿತು.
ಸಕಲೇಶಪುರ, ಬೇಲೂರು, ಆಲೂರು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಹೊಳೆನರಸೀಪುರ, ಅರಸೀಕೆರೆ ತಾಲೂಕಿನಲ್ಲಿ ಜಿಟಿಜಿಟಿ ಮಳೆಯಿಂದ ಬೆಳವಣಿಗೆ ಹಂತದಲ್ಲಿದ್ದ ರಾಗಿ, ಜೋಳ, ದ್ವಿದಳ ಧಾನ್ಯ ಬೆಳೆಗಳು ಚೇತರಿಸಿಕೊಂಡಿದ್ದು, ಜಮೀನುಗಳಲ್ಲಿ ಹಸಿರು ನಳನಳಿಸುತ್ತಿದೆ.
ಜಲಾನಯನ ಪ್ರದೇಶಗಳಾದ ಮೂಡಿಗೆರೆ, ಸಕಲೇಶಪುರ ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ 9,709 ಕ್ಯೂಸೆಕ್ ಒಳಹರಿವು ಬರುತ್ತಿದೆ.
ನಗರದಲ್ಲಿ ಇಳಿಜಾರು ಪ್ರದೇಶದ ಮನೆಗಳಿಗೆ ನೀರು ಪ್ರವೇಶಿಸಿ, ನಿವಾಸಿಗಳಿಗೆ ತೊಂದರೆ ಉಂಟಾಯಿತು. ಶೀತ ಗಾಳಿಗೆ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.
ಒಳ ಚರಂಡಿ ಹಾಗೂ ಅಮೃತ್ ಯೋಜನೆ ಕಾಮಗಾರಿ ಪೈಪ್ ಲೈನ್ ಅಳವಡಿಕೆಗೆ ರಸ್ತೆಗಳಲ್ಲಿ ತೆಗೆದಿರುವ ಗುಂಡಿಗಳಲ್ಲಿ ನೀರು ನಿಂತು ಪಾದಚಾರಿಗಳು ಮತ್ತು ವಾಹನ ಸವಾರರು ಪರದಾಡುತ್ತಿದ್ದಾರೆ.
ಜಿಲ್ಲೆಯಲ್ಲಿನ ಮಳೆ ವರದಿ:
ಜಿಲ್ಲೆಯಲ್ಲಿ ಅ.14ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲೂಕಿನ ಸಾಲಗಾಮೆ 2.4 ಮಿ.ಮೀ., ಹಾಸನ 1.6 ಮಿ.ಮೀ., ಕಟ್ಟಾಯ 14.3 ಮಿ.ಮೀ., ದುದ್ದ 0.8 ಮಿ.ಮೀ., ಶಾಂತಿಗ್ರಾಮ 2 ಮಿ.ಮೀ., ಗೊರೂರು 15.3 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ 16.3 ಮಿ.ಮೀ., ಸಕಲೇಶಪುರ 23.8 ಮಿ.ಮೀ., ಬೆಳಗೋಡು 18.6 ಮಿ.ಮೀ., ಹಾನಬಾಳು 34.2 ಮಿ.ಮೀ., ಶುಕ್ರವಾರ ಸಂತೆ 69 ಮಿ.ಮೀ., ಮಾರನಹಳ್ಳಿ 88.2 ಮಿ.ಮೀ., ಹೊಸೂರು 22 ಮಿ.ಮೀ., ಹೆತ್ತೂರು 77.4 ಮಿ.ಮೀ., ಯಸಳೂರು 48.1 ಮಿ.ಮೀ. ಮಳೆಯಾಗಿದೆ.
ಆಲೂರು ತಾಲೂಕಿನ ಪಾಳ್ಯ 16.4ಮಿ.ಮೀ., ಆಲೂರು 8.4 ಮಿ.ಮೀ., ಕುಂದೂರು 25.8, ಕೆ ಹೊಸಕೋಟೆ 37 ಮಿ.ಮೀ ಮಳೆಯಾಗಿದೆ.
ಅರಸೀಕೆರೆ ತಾಲೂಕಿನ ಬಾಣವರ 7 ಮಿ.ಮೀ., ಜಾವಗಲ್ 7.4 ಮಿ.ಮೀ., ಕಣಕಟ್ಟೆ 2.4 ಮಿ.ಮೀ., ಗಂಡಸಿ 1.2 ಮಿ.ಮೀ., ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕೊಣನೂರು 4 ಮಿ.ಮೀ., ಬಸವಾಪಟ್ಟಣ 1.8 ಮಿ.ಮೀ., ರಾಮನಾಥಪುರ 2 ಮಿ.ಮೀ., ದೊಡ್ಡಮಗ್ಗೆ 4.2 ಮಿ.ಮೀ. ದೊಡ್ಡ ಬೆಮ್ಮತ್ತಿ 7.3 ಮಿ.ಮೀ., ಕಸಬಾ 7 ಮಿ.ಮೀ. ಮಳೆಯಾಗಿದೆ.
ಬೇಲೂರು ತಾಲೂಕಿನ ಹಳೆಬೀಡು 11.4 ಮಿ.ಮೀ., ಬೇಲೂರು 11.2 ಮಿ.ಮೀ., ಹಗರೆ 5 ಮಿ.ಮೀ., ಬಿಕ್ಕೋಡು 15 ಮಿ.ಮೀ., ಗೆಂಡೆಹಳ್ಳಿ 32.0 ಮಿ.ಮೀ, ಅರೆಹಳ್ಳಿ 26 ಮಿ.ಮೀ., ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಕಸಬಾ 2.4 ಮಿ.ಮೀ., ಬಾಗೂರು 2.2 ಮಿ.ಮೀ., ನುಗ್ಗೇಹಳ್ಳಿ 2.2 ಮಿ.ಮೀ., ಶ್ರವಣಬೆಳಗೊಳ 4.8 ಮಿ.ಮೀ., ಮಳೆಯಾಗಿದೆ.
ಹೊಳೆನರಸೀಪುರ ತಾಲೂಕಿನ ಹಳೆಕೋಟೆ 10.4 ಮಿ.ಮೀ. ಹೊಳೆನರಸೀಪುರ 4.6 ಮಿ.ಮೀ., ಹಳ್ಳಿ ಮೈಸೂರು 2.2 ಮಿ.ಮೀ. ಮಳೆಯಾಗಿದೆ.