ಹಾಸನ: ಬೆಳ್ಳಿ ಚಮಚದ ಜೊತೆ ಬೆಳೆದ ರಾಹುಲ್ ಗಾಂಧಿಗೆ ಬಡವರ ಬಗ್ಗೆ ಏನು ಗೊತ್ತು? ಬಡವರೊಂದಿಗೆ ಬೆಳೆದ ಮೋದಿಗೆ ಮಾತ್ರ ದೇಶದ ಬಡವರ ನೋವಿನ ಅರಿವಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿ ನಡೆದ ರಾಜ್ಯ ಬಿಜೆಪಿ ಪ್ರಕೋಷ್ಠ ಸಭೆಯಲ್ಲಿ ಮಾತನಾಡಿದ ಅವರು, ಬಡವರೊಂದಿಗೆ ಬೆಳೆದ ಮೋದಿ ರಾಷ್ಟ್ರದ ಜನರಿಗಾಗಿ ಒಂದು ದಿನವೂ ರಜೆ ಪಡೆಯದೆ ಶ್ರಮ ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ನಂತರ ಹಾಸನ ಹಾಗೂ ಮಂಡ್ಯ ಫಲಿತಾಂಶದ ಬಗ್ಗೆ ದೆಹಲಿಯಲ್ಲಿ ಉತ್ತಮ ಚರ್ಚೆ ನಡೆಯುತ್ತಿದೆ. ಎರಡು ಜಿಲ್ಲೆಗಳಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯಲು ಆರಂಭಿಸಿದ್ದು, ಇದಕ್ಕೆ ಪ್ರತಿಯಾಗಿ ಜೆಡಿಎಸ್ ಪಕ್ಷ ಕುಗ್ಗುತ್ತಿದೆ ಎಂದರು.
ಓದಿ: ಹೈಕೋರ್ಟ್ ಆದೇಶ ಪಾಲಿಸದ ಡಿಸಿ ರೋಹಿಣಿ ಸಿಂಧೂರಿಗೆ ನ್ಯಾಯಾಂಗ ನಿಂದನೆ ಸಂಕಷ್ಟ
ದೇಶದ 90ರಷ್ಟು ರೈತರು ಸಂತುಷ್ಟರಾಗಿದ್ದಾರೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ರೈತರಿಗೆ ಇಂದು ಬಹಳಷ್ಟು ಪ್ರಯೋಜನಕಾರಿಯಾಗಿವೆ. ಆದರೆ ಕಾಂಗ್ರೆಸ್ ಪಕ್ಷದವರು ರೈತರು ಖುಷಿಯಲ್ಲಿ ಇರುವುದನ್ನು ಸಹಿಸಲಿಲ್ಲ. ಬಿಜೆಪಿ ಪಕ್ಷ ರೈತರಿಗೆ ಸ್ವಾತಂತ್ರ್ಯ ಕೊಡಿಸಲು ಯತ್ನಿಸುತ್ತಿದೆ. ಹೆಚ್ಚು ಕಂಪನಿಗಳು ಬಂದರೆ ರೈತರಿಗೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ಅವರಿಗೆ ಬೇಕಾದ ಬೆಲೆಗೆ ಅವರು ತಾವು ಬೆಳೆದ ಬೆಳೆಗಳನ್ನು ಮಾರಬಹುದು. ಆದರೆ ಇದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಈ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಹರಿಹಾಯ್ದರು.