ಸಕಲೇಶಪುರ(ಹಾಸನ): ಹೊರ ರಾಜ್ಯಗಳಿಂದ ಬಂದವರನ್ನು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ.ಪರಮೇಶ್ ಹೇಳಿದರು. ತಾಲೂಕಿನ ವಿವಿಧೆಡೆ ಹೊರ ರಾಜ್ಯಗಳಿಂದ ಬಂದವರಿಗಾಗಿ ಮಾಡಿರುವ ಕ್ವಾರಂಟೈನ್ ಕೇಂದ್ರಗಳನ್ನು ವೀಕ್ಷಿಸಿದ ನಂತರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾಲೂಕಿಗೆ ಸದ್ಯ ಸುಮಾರು 44 ಜನ ಹೊರ ರಾಜ್ಯಗಳಿಂದ ಆಗಮಿಸಿದ್ದು, ಪಟ್ಟಣದ ದುರ್ಗಾ ಹೋಟೆಲ್, ಬಾಳ್ಳುಪೇಟೆ ಹಾಸ್ಟೆಲ್, ಹೆತ್ತೂರಿನ ಮೊರಾರ್ಜಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಅವರ ಸಣ್ಣಪುಟ್ಟ ಅವಶ್ಯಕತೆಗಳನ್ನು ಸಹ ಪೂರೈಕೆ ಮಾಡಲಾಗಿದೆ ಎಂದರು.
ಸದ್ಯಕ್ಕೆ ತಾಲೂಕಿನಲ್ಲಿ ಯಾವುದೇ ಆತಂಕವಿಲ್ಲ. ಸರ್ಕಾರದ ನಿರ್ದೇಶನದಂತೆ ಯಾರು ಹೊರ ರಾಜ್ಯಗಳಿಂದ ಬರುತ್ತಾರೋ ಅಂತವರನ್ನು ಸೇವಾ ಸಿಂಧು ಆ್ಯಪ್ ಮುಖಾಂತರ ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ಜೊತೆಗೆ ಕದ್ದುಮುಚ್ಚಿ ಬರುವವರ ಮಾಹಿತಿ ಸಂಗ್ರಹಿಸಿ ಕ್ವಾರಂಟೈನ್ ಮಾಡಲು ಪ್ರತಿ ಗ್ರಾಪಂ ಸಿಬ್ಬಂದಿಗೆ ಆದೇಶಿಸಲಾಗಿದೆ ಎಂದರು.
ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಸುಮಾರು 300 ಜನ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗ ಬೇಕಾದವರು ತಾಪಂಗೆ ಸಂಪರ್ಕಿಸಬಹುದೆಂದು ತಿಳಿಸಿದರು.