ಹಾಸನ : ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿನಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಪರ-ವಿರೋಧಗಳ ನಡುವೆ ಪ್ರಯಾಣ ಬೆಳೆಸಿದ ಕುಮಾರಸ್ವಾಮಿ ಅವರ ನಡೆ ಬಗ್ಗೆ ಹಾಸನ ಜಿಲ್ಲೆಯ ಜನರು ಕೆಲವು ಸಲಹೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಿಂದ ಗ್ರಾಮ ವಾಸ್ತವ್ಯ ಶುರು ಮಾಡುತ್ತಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮತ್ತೆ ಟೀಕೆಗಿಳಿದಿದೆ. ಸರ್ಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಬದಲಿಗೆ ಸರ್ಕಾರಿ ಕಚೇರಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದರೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟುತ್ತದೆ. ದಯಮಾಡಿ ಅಂಥ ಕೆಲಸವನ್ನು ಮಾಡಿ ಎಂದು ಸಲಹೆ ನೀಡಿದ್ದಾರೆ.
ಸಾಮಾನ್ಯ ಜನ ಮಾತ್ರ ಸಿಎಂ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯವನ್ನು ಸ್ವಾಗತ ಮಾಡುತ್ತಿದ್ದಾರೆ. ಬಿಜೆಪಿ ಆರೋಪ ಮಾಡುವುದರಲ್ಲಿ ಒಂದು ಪ್ರಕಾರ ಸರಿ ಇದ್ದರೆ, ಅದು ಕೆಲವೊಮ್ಮೆ ರಾಜಕೀಯ ಪ್ರೇರಿತವಾಗಿ ಇರುತ್ತೆ. ಹೀಗಾಗಿ ಆಡಳಿತ ಪಕ್ಷ ಯಾವುದೇ ಕಾರ್ಯಕ್ರಮ ಮಾಡಿದರೂ ಪ್ರತಿಪಕ್ಷದಲ್ಲಿರುವ ಮುಖಂಡರು ಆರೋಪ ಮಾಡುವುದು ಸಹಜ. ಆದರೆ, ಗ್ರಾಮ ವಾಸ್ತವ್ಯ ನೆಪ ಮಾತ್ರಕ್ಕೆ ಆಗದೇ ಗ್ರಾಮೀಣ ಭಾಗದ ರೈತರ ಕಷ್ಟಗಳಿಗೆ ನೆರವಾಗಬೇಕು- ವಿಜಯ್ ಕುಮಾರ್, ಬಿಜೆಪಿ ಮುಖಂಡ
ಸಿಎಂ ವಾಸ್ತವ್ಯ ಮಾಡಿದ ಗ್ರಾಮಗಳು ಯಾವುದಾದರೂ ಒಂದು ರೀತಿಯಲ್ಲಿ ಅಭಿವೃದ್ಧಿ ಹೊಂದಿದಾಗ ಮಾತ್ರ ಗ್ರಾಮ ವಾಸ್ತವ್ಯಕ್ಕೆ ಅರ್ಥ ಬರುತ್ತದೆ. ಅಂತಹ ಕೆಲಸವನ್ನು ಕುಮಾರಸ್ವಾಮಿ ಅವರು ಮಾಡಬೇಕು. - ಜನಾರ್ಧನ್, ಶ್ರವಣಬೆಳಗೊಳದ ನಿವಾಸಿ
ವಿದ್ಯಾವಂತರಿಗೆ ಸ್ಥಳೀಯವಾಗಿ ಗುಡಿಕೈಗಾರಿಕೆ ಅಥವಾ ಯಾವುದಾದರೂ ಕಂಪನಿಯನ್ನು ತೆರೆದು ಉದ್ಯೋಗ ಸೃಷ್ಟಿ ಮಾಡಿದರೆ ಗ್ರಾಮ ವಾಸ್ತವ್ಯಕ್ಕೆ ಮತ್ತಷ್ಟು ಮೆರಗು ಬರುತ್ತದೆ. - ಅಂಬಿಕಾ, ನಿರುದ್ಯೋಗಿ
ಪ್ರತಿ ಇಲಾಖೆಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ಕುಮಾರಸ್ವಾಮಿಯವರು ಇದಕ್ಕೆ ಕಡಿವಾಣ ಹಾಕಬೇಕು. ಅಭಿವೃದ್ಧಿಯಾಗಬೇಕೆಂದರೆ ಅಧಿಕಾರಿಗಳು ಹಣದ ಸುಲಿಗೆಯನ್ನು ನಿಲ್ಲಿಸಬೇಕು. ಹೀಗೆ ಮಾಡಿದರೆ ಬಹುಶಃ ಗ್ರಾಮ ವಾಸ್ತವ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ. - ನಂದೀಶ, ಹಿರಿಯ ಪತ್ರಕರ್ತರು.
ಕೆಲವು ಸಂಘಟನೆಗಳು ಮಾತ್ರ ಗ್ರಾಮ ವಸ್ತವ್ಯವನ್ನು ವಿರೋಧಿಸುತ್ತಿವೆ. ಗ್ರಾಮಗಳ ಅಭಿವೃದ್ಧಿ ಮುಖ್ಯಮಂತ್ರಿಗಳೇ ಮಾಡಬೇಕೆಂದೇನಿಲ್ಲ. ಜಿಲ್ಲೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳಿಗೆ ಇಂತಹ ಕೆಲಸ ಮಾಡಬೇಕು ಎಂಬ ಆದೇಶವನ್ನು ನೀಡಿದರೆ ಸಾಕು. ಗ್ರಾಮಗಳು ಅಭಿವೃದ್ಧಿಯಾಗಬಹುದು. - ಮನುಕುಮಾರ್, ಕರವೇ ಜಿಲ್ಲಾಧ್ಯಕ್ಷ