ಹಾಸನ: ಸಾರ್ವಜನಿಕರ ಅನುಕೂಲಕ್ಕಾಗಿ ಹಾಕಿದ್ದ ರಸ್ತೆ ಉಬ್ಬನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸರುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಂಡು, ತಕ್ಷಣ ರಸ್ತೆ ಉಬ್ಬು ನಿರ್ಮಿಸಬೇಕೆಂದು ಒತ್ತಾಯಿಸಿ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಮಾತನಾಡಿ, ಅಂಬೇಡ್ಕರ್ ವೃತ್ತದಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಹಾಗೂ ಸಾರ್ವಜನಿಕರು ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಓಡಾಡುತ್ತಾರೆ. ಆದರೆ ಈ ರಸ್ತೆಯಲ್ಲಿ ಹಂಪ್ಸ್ ಇಲ್ಲದ ಕಾರಣ ಅತಿ ವೇಗವಾಗಿ ವಾಹನಗಳು ಸಂಚರಿಸಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಲ್ಲದೆ ಈ ಹಿಂದೆ ಸಾಕಷ್ಟು ಅಪಘಾತಗಳು ಸಂಭವಿಸಿದ ಹಿನ್ನಲೆ ಈ ಸ್ಥಳದಲ್ಲಿ ಹಂಪ್ಸ್ ನಿರ್ಮಿಸಿದ್ರು. ಆದರೆ ಕೆಲ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಿದ್ದು ಖಂಡನೀಯ ಎಂದರು.
ಇನ್ನು ಈ ಕೃತ್ಯವೆಸಗಿದವರ ಪತ್ತೆ ಹಚ್ಚಿ ಅವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ತಕ್ಷಣವೇ ಅಂಬೇಡ್ಕರ್ ವೃತ್ತದ ಗೆಂಡೇಹಳ್ಳಿ ರಸ್ತೆಗೆ ರಸ್ತೆ ಉಬ್ಬು ನಿರ್ಮಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.