ಹಾಸನ: ಎತ್ತಿನಹೊಳೆ ಕಾಮಗಾರಿಯ ತಾರತಮ್ಯ ನೀತಿಯನ್ನು ಖಂಡಿಸಿ ಕಲ್ಯಾಡಿ, ಕರಗುಂದ, ಹಂದ್ರಾಳ, ಉಂಡಿಗನಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರು ಎತ್ತಿನಹೊಳೆ ಕಾಮಗಾರಿಗೆ ತಮ್ಮ ಜಮೀನು ಕಳೆದುಕೊಂಡಿದ್ದು, ಕಾಮಗಾರಿ ನಡೆಯುವ ಪ್ರದೇಶಗಳ ಜನರ ಜಮೀನುಗಳಿಗೆ ಪ್ರಾಮಾಣಿಕವಾದ ಹಣ ಸಿಕ್ಕಿಲ್ಲ. ಅಂದರೆ ರಾಜ್ಯದ ಸಕಲೇಶಪುರ ಮತ್ತು ಸುತ್ತಮುತ್ತಲಿನ ಜಾಗಕ್ಕೆ ಸುಮಾರು 1 ಎಕರೆಗೆ 35 ಲಕ್ಷ ರೂ. ಹಣ ಪಾವತಿಸಿರುತ್ತಾರೆ, ಆದರೆ ಈ ಭಾಗದವರಿಗಿಲ್ಲ. ಎತ್ತಿನಹೊಳೆ ಕಾಮಗಾರಿ ಹೆಸರಿನಲ್ಲಿ ಜಮೀನು ಕಳೆದುಕೊಂಡಿರುವ ಜನರಿಗೆ ಸರ್ಕಾರದಿಂದ ಅನ್ಯಾಯ ಮಾಡಿದಂತಾಗಿದೆ. ಹಾಗಾಗಿ ಈ ಜಾಗದ ಜಮೀನುದಾರರ ಜಮೀನುಗಳನ್ನು ಸರಕಾರಕ್ಕೆ ಬಿಟ್ಟು ಕೊಡಲು ರೈತರಿಗೆ ಸೂಕ್ತವಾಗಿ ಪರಿಹಾರ ಕೊಡಿಸಿ ಈ ತಾರತಮ್ಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಈ ಗ್ರಾಮಗಳು ಅರಸೀಕೆರೆ ತಾಲೂಕಿಗೆ ಸೇರಿದ್ದು, ಈ ತಾಲೂಕು 10 ವರ್ಷದಿಂದ ಬರಗಾಲದಿಂದ ಬೆಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ದೂರಿದರು. ಜೊತೆಗೆ ಜಮೀನು ಕಳೆದುಕೊಳ್ಳುವ ಜಾಗದ ಗ್ರಾಮಗಳಿಗೆ ಎತ್ತಿನ ಹೊಳೆಯಿಂದ ಕೆರೆಗಳಿಗೆ ನೀರು ತುಂಬಿಸಿದರೆ ದನಕರುಗಳಿಗೆ ಮತ್ತು ಜನರಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ. ಹಾಗಾಗಿ ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ಜಾಗಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ವಿನಂತಿಸಿದರು.
ಎಲ್ಲಾ ರೈತರಿಗೆ ಸರ್ಕಾರ ಸರಿಯಾದ ರೀತಿಯಲ್ಲಿ ದರ ನಿಗದಿ ಪಡಿಸಿ, ರೈತರಿಗೆ ಅನೂಕೂಲ ಮಾಡಿಕೊಡಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರು ಪುರಾತನ ಕಾಲದಿಂದಲೂ ಜಮೀನನ್ನು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಸರ್ಕಾರ ಈ ಹಿಂದೆ 53 ರಲ್ಲಿ ಅರ್ಜಿ ಕರೆದಿದ್ದು, ರೈತರು ಅರ್ಜಿ ಹಾಕಿರುತ್ತಾರೆ. ಆದರೆ ಈ ಜಮೀನುಗಳಿಗೆ ಖಾತೆ ಆಗಿರುವುದಿಲ್ಲ. ಆದರೀಗ ಜಮೀನುಗಳು ಎತ್ತಿನಹೊಳೆ ಕಾಮಗಾರಿಗೆ ಬಳಕೆಯಾಗಿದ್ದು, 100 ಜನ ಜಮೀನು ಕಳೆದುಕೊಂಡು ನಿರ್ಗತಿಕರಾಗಿ ಬೀದಿಗೆ ಬೀಳುತ್ತಿದ್ದಾರೆ. ಕೂಡಲೇ ಇವರಿಗೆ ಸೂಕ್ತ ಪರಿಹಾರ ಕೊಟ್ಟು ನಿರಾಶ್ರಿತರ ಬದುಕನ್ನು ಹಸನುಗೊಳಿಸಬೇಕಾಗಿ ಮನವಿ ಮಾಡಿದರು.
ಪ್ರಮುಖ ಬೇಡಿಕೆಗಳು : ಕುಡಿಯುವ ನೀರಿಗಾಗಿ ಕಲ್ಯಾಡಿ, ಉಂಡಿಗನಾಳು, ಕರಗುಂದ, ಹಂದ್ರಾಳು ಗ್ರಾಮ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಬೇಕು. ರೈತರ ಜಮೀನುಗಳಿಗೆ ಸಕಲೇಶಪುರದಲ್ಲಿ ನಿಗದಿಪಡಿಸಿರುವಂತೆ ದರ ನಿಗದಿಪಡಿಸಲಿ. 53 ರಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಸೂಕ್ತ ಪರಿಹಾರ ದೊರಕಿಸಲಿ. ಹೀಗೆ ಮೇಲೆ ತಿಳಿಸಿರುವ ಬೇಡಿಕೆಯನ್ನು ಈಡೇರಿಸುವವರೆಗೂ ಆಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾಡುವುದಾಗಿ ಎಚ್ಚರಿಸಿದರು.