ಹಾಸನ: ದಕ್ಷ, ಪ್ರಾಮಾಣಿಕ ಉಪ ವಿಭಾಗಧಿಕಾರಿ ಹೆಚ್.ಎಲ್.ನಾಗರಾಜು ಅವರಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಿ ಅಪಮಾನ ಮಾಡಲಾಗಿದ್ದು, ಕೂಡಲೇ
ವರ್ಗಾವಣೆ ಆದೇಶ ರದ್ದು ಮಾಡುವಂತೆ ಆಗ್ರಹಿಸಿ ವಿವಿಧ ಜನಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಹಾಸನದ ಉಪ ವಿಭಾಗಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಹೆಚ್.ಎಲ್.ನಾಗರಾಜು ಅವರನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ರಾಜ್ಯದಲ್ಲೇ ಪ್ರಾಮಾಣಿಕ ಅಧಿಕಾರಿ ಎನಿಸಿಕೊಂಡಿರುವ ಹೆಚ್.ಎಲ್.ನಾಗರಾಜು ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ವರ್ಗಾವಣೆ ಮಾಡುವುದು ಶಿಕ್ಷೆಯ ಒಂದು ವಿಧಾನ ಎಂಬ ಮಾತು ಚಾಲ್ತಿಯಲ್ಲಿದೆ. ಪ್ರಾಮಾಣಿಕ ಅಧಿಕಾರಿಗಳಾದ ಡಾ. ನಾಗರಾಜ್ ಅವರು ಇಂತಹ ಶಿಕ್ಷೆಗೆ ನಿಜವಾಗಿಯೂ ಭಾಜನರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನಾಂಬ ದೇವಾಲಯದ ಆಡಳಿತಾಧಿಕಾರಿಗಳೂ ಆಗಿರುವ ಡಾ. ನಾಗರಾಜು ಅವರು, ದೇವಸ್ಥಾನದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂಬ ಕಾರಣಕ್ಕಾಗಿ ಅವರ ವರ್ಗಾವಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಅಕ್ಟೋಬರ್ 30ರವರೆಗೆ ಕಾರ್ಯನಿರ್ವಹಿಸಲು ಸರಕಾರದಿಂದ ಆದೇಶವಾಗಿದೆ. ಒಬ್ಬ ಅಧಿಕಾರಿಯನ್ನು ದೇವಸ್ಥಾನದ ಕೆಲಸಕ್ಕಷ್ಟೇ ದುಡಿಸಿಕೊಂಡು ಕಳುಹಿಸುವುದು ಮಾನವೀಯ ಲಕ್ಷಣವಲ್ಲ. ಉಪ ವಿಭಾಗಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಕಂದಾಯ ಅದಾಲತ್‌ನಲ್ಲಿ 30 ಸಾವಿರಕ್ಕೂ ಅಧಿಕ ಪ್ರಕರಣಗಳನ್ನ ತ್ವರಿತವಾಗಿ ಇತ್ಯರ್ಥಗೊಳಿಸಿ, ಬಡವರ ಬಾಳಿನ ನಂದಾ ದೀಪವಾಗಿದ್ದಾರೆ. ಇಲಾಖೆಯ ನೌಕರರ ಜೊತೆಗೆ ಸಾರ್ವಜನಿಕ ವಲಯದಲ್ಲೂ ಕೂಡ ವಿಶ್ವಾಸ ಗಳಿಸಿಕೊಂಡಿರುವ ನಾಗರಾಜು ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಮತ್ತೆ ಹಾಸನ ಉಪ ವಿಭಾಗಾಧಿಕಾರಿಗಳಾಗಿ ನಿಯುಕ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.