ಹಾಸನ: ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರಜ್ವಲ್ ರೇವಣ್ಣನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಂದು ಮಧ್ಯಾಹ್ನ ಸಂಸದ ಪ್ರಜ್ವಲ್ ರೇವಣ್ಣನ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿ ಆಹಾರ ಧಾನ್ಯ ಕಿಟ್ ಹಂಚಿಕೆಯಲ್ಲಿ ಹಾಸನ ಶಾಸಕ ಪ್ರೀತಂ ಜೆ. ಗೌಡ ಅಕ್ರಮವೆಸೆಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ರು.
ಪ್ರತಿಭಟನೆಗೆ ಕಾರಣ:
ದೇಶದಲ್ಲಿ ಮಹಾಮಾರಿ ಕೊರೊನಾ ಆರ್ಭಟಕ್ಕೆ ದೇಶದ ಜನರು ನಲುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಫುಡ್ ಕಿಟ್, ಮೆಡಿಕಲ್ ಕಿಟ್ ಸೇರಿದಂತೆ ಸಾಕಷ್ಟು ಸಹಾಯವನ್ನು ಉಳ್ಳವರು, ಸಂಘ ಸಂಸ್ಥೆಗಳು ಮಾಡ್ತಿವೆ. ಸರ್ಕಾರ ಕೂಡ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ನೀಡಬೇಕಾಗಿರುವ ಫುಡ್ ಕಿಟ್ಗಳನ್ನು ಹಾಸನದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆಗೆ ಬಂದಿದ್ದ ಆಹಾರ ಧಾನ್ಯದ ಕಿಟ್ಗಳನ್ನು ಬಿಜೆಪಿ ಶಾಸಕರು ಪಡೆದು ಪಕ್ಷದಿಂದ ನೀಡಲಾಗುತ್ತಿದೆ ಎಂದು ಹಂಚಿಕೆ ಮಾಡುತ್ತಿದ್ದಾರೆಂಬ ಆರೋಪ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡರ ವಿರುದ್ಧ ಕೇಳಿ ಬಂದಿದೆ.
ಹಾಸನ ಜಿಲ್ಲೆಗೆ 46 ಸಾವಿರ ಕಿಟ್ ಕೊಡೋದಕ್ಕೆ ಅಲಾಟ್ ಆಗಿದೆ. ಜಿಲ್ಲೆಗೆ ಸದ್ಯ 20 ಸಾವಿರ ಕಿಟ್ ಬಂದಿದ್ದು, ಜನಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸ್ಥಳೀಯ ಆಡಳಿತದ ಜೊತೆ ಸೇರಿ ಹಂಚಬೇಕೆಂದು ಸರ್ಕಾರದ ಮಾರ್ಗಸೂಚಿಯಿದೆ. ಆದ್ರೆ ಫುಡ್ ಕಿಟ್ ನಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಜೆಡಿಎಸ್ ಪಕ್ಷದ್ದು.
ಇದನ್ನೂ ಓದಿ: ಮೈಸೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಮುಚ್ಚಬಾರದು: ಸಚಿವ ಸುಧಾಕರ್ ಸೂಚನೆ
ಇದರ ವಿರುದ್ಧ ಇಂದು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಸಂಸದ ಪ್ರಜ್ವಲ್ ರೇವಣ್ಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರೋ ಅಧಿಕಾರಿಗಳನ್ನು ಕೂಡಾ ಅಮಾನತು ಮಾಡಬೇಕೆಂದು ಒತ್ತಾಯಿಸಿದ್ರು..