ಹಾಸನ: ಬಾಕಿ ಉಳಿಸಿಕೊಂಡಿರುವ 15 ತಿಂಗಳ ಸಂಬಳವನ್ನು ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಿ ಎಂ ರಸ್ತೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿತು. ಆಶಾ ಕಾರ್ಯಕರ್ತೆಯರಿಗೆ 15 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಎಂಸಿಟಿಎಸ್ ಪ್ರೋತ್ಸಾಹ ಧನವನ್ನು ಪಾವತಿಸಬೇಕು. ಇಲ್ಲದಿದ್ರೆ ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ ಮುಂದಿನ ದಿನಗಳಲ್ಲಿ ಯಾವುದೇ ಆರೋಗ್ಯ ಸೇವೆಗಳು, ತರಬೇತಿ ಮತ್ತು ಪರೀಕ್ಷೆಗಳು, ಸಭೆಗಳು ಸೇರಿ ಇತರೆ ಕೆಲಸಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಕವಿತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.