ಹಾಸನ: ನಗರ ಹೊರವಲಯದ ಗೆಂಡೆಕಟ್ಟೆ ಉದ್ಯಾನದಲ್ಲಿ ಫೆ.23ರಂದು ಕಾಣಿಸಿಕೊಂಡಿದ್ದ ಬೆಂಕಿಯ ಅವಘಡದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಗೆಂಡೆಕಟ್ಟೆ ಉದ್ಯಾನದಲ್ಲಿರುವ ಮಕ್ಕಳ ಕ್ರೀಡಾ ಸಾಮಗ್ರಿಗಳ ಸಮೀಪದ ಖಾಲಿ ಜಾಗದಲ್ಲಿ ಬೆಂಕಿ ಬಿದ್ದಿದ್ದು, ಒಣಗಿದ ಹುಲ್ಲು ಸುಟ್ಟು ಕರಕಲಾಗಿದೆ. ಅಂದಾಜು 1 ಎಕರೆಗೆ ಬೆಂಕಿ ವ್ಯಾಪಿಸಿದ್ದು ಬಿದಿರು ಮರಗಳು ಬೆಂಕಿಗೆ ಆಹುತಿಯಾಗಿವೆ. ಈಗ ಬೆಂಕಿ ಬಿದ್ದಿರುವ ಪ್ರದೇಶದಿಂದ 300ಮೀ. ದೂರದಲ್ಲಿ ಕಡವೆಗಳು ಕಾಣಿಸಿಕೊಂಡಿವೆ.
ಉದ್ಯಾನ ವೀಕ್ಷಣೆಗೆಂದು ಬಂದಿದ್ದ ಯುವಕರು ಸಿಗರೇಟ್ ಸೇದಿ ಅಲ್ಲಿಯೇ ಬಿಸಾಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಉದ್ಯಾನದೊಳಗೆ ಸಿಸಿಟಿವಿ ಹಾಗೂ ಬಿಗಿ ಭದ್ರತೆ ಇಲ್ಲದ ಕಾರಣ ಕೃತ್ಯ ಎಸಗಿದವರು ಯಾರು ಎಂಬುದು ತಿಳಿದುಬಂದಿಲ್ಲ.
ಫೆ. 23 ರಿಂದಲೇ ಪ್ರವೇಶ ನಿಷೇಧ :
ಫೆ.23 ರಿಂದಲೇ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಮೇ ವರೆಗೆ ಯಾರೂ ಆ ಕಡೆಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ. ಉದ್ಯಾನವಕ್ಕೆ ಪ್ರವೇಶ ಕಲ್ಪಿಸುವ ಗೇಟ್‌ಗೆ ಇದೀಗ ಬೀಗ ಜಡಿಯಲಾಗಿದೆ.
318 ಎಕರೆ ವಿಸ್ತಾರವನ್ನು ಗೆಂಡೆಕಟ್ಟೆ ಅರಣ್ಯ ಹೊಂದಿದ್ದು 25 ಎಕರೆಯಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಇಲ್ಲಿ 100 ಜಿಂಕೆ ಹಾಗೂ 2 ಕಡವೆಗಳಿವೆ. ಪ್ರವಾಸಿ ಮಂದಿರ, ವಿಶ್ರಾಂತಿ ತಾಣ, ಮಕ್ಕಳ ಕ್ರೀಡಾ ಸಾಧನಗಳೊಂದಿಗೆ ಆಟವಾಡಲು ಗೆಂಡೆಕಟ್ಟೆಗೆ ನಿತ್ಯ ನೂರಾರು ಜನರು ಬರುತ್ತಾರೆ. ಆದರೆ, ಬೆಂಕಿ ಅವಘಡ ಹಿನ್ನೆಲೆಯಲ್ಲಿ ಬೇಸಿಗೆ ಕಳೆಯುವವರೆಗೆ ಪ್ರವೇಶ ನಿಷೇಧಿಸಲಾಗಿದೆ.
ಇನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಗೆಂಡೆಕಟ್ಟೆ ಉದ್ಯಾನದಲ್ಲಿ ಭದ್ರತಾ ವ್ಯವಸ್ಥೆ ಸಹ ಇಲ್ಲದಾಗಿದೆ. ರಾತ್ರಿ ಪಾಳಿಯಲ್ಲಿ ಮೂವರು ಹಾಗೂ ಹಗಲು ವೇಳೆ ನಾಲ್ವರು ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಜಿಂಕೆ ಹಾಗೂ ಕಡವೆಗಳಿಗೆ ಆಹಾರ ಸಿದ್ಧಪಡಿಸುವುದೇ ದೊಡ್ಡ ಕೆಲಸವಾಗಿದ್ದು ಇನ್ನು ಗಸ್ತು ತಿರುಗಲು ಯಾರೂ ಇಲ್ಲದಂತಾಗಿದೆ. ಮುಖ್ಯ ದ್ವಾರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರೆ ಭೇಟಿ ನೀಡಿದವರ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಅಥವಾ ಶಾಶ್ವತವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರೆ ಹೆಚ್ಚು ಅನುಕೂಲವಾಗುತ್ತೆ ಎನ್ನುತ್ತಾರೆ ಇಲ್ಲಿಯ ಸಿಬ್ಬಂದಿ.
ಅಷ್ಟೇ ಅಲ್ಲದೇ, ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಗೆಂಡೆಕಟ್ಟೆಗೆ ಹೋಗಲು ಕಿರಿದಾದ ರಸ್ತೆ ಇದೆ. ಈ ರಸ್ತೆ ಉದ್ಯಾನಕ್ಕೆ ಮಾತ್ರವಲ್ಲದೆ ಬಸವನಹಳ್ಳಿ, ಕೊಪ್ಪಲು, ಹೊನ್ನೇನಹಳ್ಳಿ, ಕೈಗಾರಿಕಾ ಪ್ರದೇಶ, ಚಿಕ್ಕಬಸವನಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ರಸ್ತೆ ಸಂಚಾರ ನಿಷೇಧಿಸಿದರೆ ಗ್ರಾಮಗಳಿಗೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಇಲ್ಲಿ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ದಾರಿಹೋಕರು ಬೀಡಿ, ಸಿಗರೇಟ್ ಸೇದುತ್ತಾ ಹೋಗುತ್ತಾರೆ. ಉದ್ಯಾನದ ಮುಖ್ಯದ್ವಾರ ಪ್ರವೇಶ ನಿಷೇಧಿಸಿದ್ದರಿಂದ ಯುವಕರು ಮತ್ತೊಂದು ದಾರಿ ಕಂಡುಕೊಂಡಿದ್ದು, ಅರಣ್ಯ ಇಲಾಖೆಯ ಬೇಲಿ ಮುರಿದು ಒಳ ನುಗ್ಗುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರಿಂದಲೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.