ಹಾಸನ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು, ಅವು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದಕ್ಕೆ ಅರಸೀಕೆರೆ ತಾಲೂಕಿನ ಅರಕೆರೆ ಗ್ರಾಮದ ಅಂಗನವಾಡಿ ಕೇಂದ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವುದೇ ಸಾಕ್ಷಿಯಾಗಿದೆ.
ಶಿಶುವಿಹಾರ ಕೇಂದ್ರದ ಸೂರು ಕುಸಿದು ಬೀಳುವ ಸ್ಥಿತಿ ತಲುಪಿದ್ದು, ಮಕ್ಕಳು ಭಯದ ನೆರಳಿನಲ್ಲಿ ಪಾಠ ಕೇಳುವಂತಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದ ಕೇಂದ್ರದಲ್ಲಿ 28 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ಕಾಲೋನಿಯಲ್ಲಿರುವ ಶಿಶು ಕೇಂದ್ರದಲ್ಲಿ 8 ಮಕ್ಕಳು ಒದುತ್ತಿದ್ದು, ಎರಡು ಕೇಂದ್ರಗಳಲ್ಲಿ ತಲಾ ಒಬ್ಬ ಶಿಕ್ಷಕಿ ಮತ್ತು ಅಡುಗೆ ಸಹಾಯಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂವರೆ ದಶಕದ ಹಿಂದೆ ನಿರ್ಮಿಸಿರುವ ಕಟ್ಟಡದ ಸುತ್ತಲಿನ ಗೋಡೆಗಳು ಬಿರುಕು ಬಿಟ್ಟಿದ್ದು, ಚಾವಣಿಯಲ್ಲಿನ ಮರದ ತೊಲೆಗಳು ಹುಳಗಳ ಹಾವಳಿಯಿಂದ ಪುಡಿ ಪುಡಿಯಾಗಿ ಉದುರಿ ಇಂದೋ ಇಲ್ಲ ನಾಳೆಯೋ ಬೀಳುವ ಸ್ಥಿತಿ ತಲುಪಿದೆ. ಇನ್ನು ಅಡುಗೆ ಕೋಣೆ ಬಳಸದ ಸ್ಥಿತಿ ತಲುಪಿದ್ದು, ಇಲ್ಲಿಯೇ ಮಕ್ಕಳನ್ನು ಕೂರಿಸಲಾಗುತ್ತಿದೆ.
ಕಡಪದ ಕಲ್ಲಿನ ಕೆಳಭಾಗದಲ್ಲಿ ಆಗಾಗ ಹೆಗ್ಗಣಗಳು, ಹಾವು, ಚೇಳು ಕಾಣಿಸಿಕೊಳ್ಳುತ್ತವಂತೆ. ಅಂಗನವಾಡಿ ಅಕ್ಕಪಕ್ಕ ಹಾಗೂ ಹಿಂಭಾಗದಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಈ ಎಲ್ಲಾ ಅವ್ಯವಸ್ಥೆಯಿಂದ ಪೋಷಕರು ಮಕ್ಕಳನ್ನು ಶಿಶು ಕೇಂದ್ರಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಮಳೆ ಬಂದರೆ ನೀರು ಸೋರಿ ಕುಳಿತುಕೊಳ್ಳಲು ಆಗುವುದಿಲ್ಲ. ಚಾವಣಿ ಸಂಪೂರ್ಣ ಶಿಥಿಲಗೊಂಡಿದೆ. ದುರಸ್ತಿ ಮಾಡಲು ಆಗದ ಸ್ಥಿತಿ ತಲುಪಿದೆ. ಯಾವಾಗ ಬೇಕಾದರೂ ಕಟ್ಟಡ ಬೀಳುವ ಸಾಧ್ಯತೆ ಇದೆ. ಎರಡು ಅಂಗನವಾಡಿಗಳಲ್ಲೂ ಮೂಲ ಸೌಕರ್ಯ ಕೊರತೆ ಇದೆ. ಕುಡಿಯುವ ನೀರಿಲ್ಲ, ಶೌಚಾಲಯ ಕೇಳುವಂತಿಲ್ಲ. ಅಡುಗೆ ಕೋಣೆ ಇಲ್ಲದೇ ಈ ಅಂಗನವಾಡಿ ಕೇಂದ್ರ ಸಮಸ್ಯೆಗಳ ಆಗರವಾಗಿದೆ.
ಬಹಿರ್ದೆಸೆಗೆ ಮಕ್ಕಳು ಬಯಲನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಾಲಮಂದಿರದ ಸಮೀಪ ಹೊಯ್ಸಳರ ಕಾಲದ ಚನ್ನಕೇಶವ ದೇವಾಲಯವಿದ್ದು, ಕೇಂದ್ರ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಹಾಗಾಗಿ ದೇವಾಲಯದ 300 ಮೀಟರ್ ಸುತ್ತ ಯಾವುದೇ ಕಟ್ಟಡ ನಿರ್ಮಿಸದಂತೆ ಆದೇಶ ಹೊರಡಿಸಿದೆ. ಹೀಗಾಗಿ ದುರಸ್ತಿಯಲ್ಲಿರುವ ಶಾಲಾ ಕಟ್ಟಡವನ್ನ, ಅಂಗನವಾಡಿ ಕೇಂದ್ರವನ್ನ ಪುನರ್ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಈಗಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈತ್ತ ಗಮನ ಹರಿಸಿಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.