ಹಾಸನ : ವರ್ಷಕ್ಕೊಮ್ಮೆ ದರ್ಶನ ಹಾಸನಾಂಬೆಯ ದರ್ಶನ ಪಡೆದು ಭಕ್ತರು ಪುನೀತರಾಗ್ತಿದ್ದರು. ಆದರೆ, ಈ ಸಾರಿ ಅಧಿದೇವತೆಯ ದರ್ಶನ ಗೊಂದಲಮಯವಾಗಿದೆ. ಆನ್‌ಲೈನ್ ದರ್ಶನಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗುತ್ತಿದೆ. ಕೆಲ ಭಕ್ತರು ಆನ್‌ಲೈನ್ ದರ್ಶನದ ವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿವರ್ಷ ಆಶ್ವೀಜ ಮಾಸದ ಮೊದಲ ಗುರುವಾರದಿಂದ ಹಾಸನಾಂಬ ದರ್ಶನ ಪ್ರಾರಂಭವಾಗುತ್ತೆ. ಈ ಬಾರಿ ನ.5 ರಿಂದ 17ರ ತನಕ ಜಾತ್ರಾ ಮಹೋತ್ಸವ ನಡೆಯಲಿದೆ. ಕೊರೊನಾ ಪ್ರಭಾವದಿಂದ ಈ ಬಾರಿ ಜಾತ್ರಾ ಮಹೋತ್ಸವ ಹೇಗೆ ನಡೆಸಬೇಕೆಂಬ ಗೊಂದಲ ಉಂಟಾಗಿದೆ. ತಾತ್ಕಾಲಿಕವಾಗಿ ಆನ್‌ಲೈನ್ ವ್ಯವಸ್ಥೆಗೆ ಜಿಲ್ಲಾಡಳಿತ ಸಜ್ಜಾಗುತ್ತಿದೆ.
ಆನ್ ಲೈನ್ ದರ್ಶನಕ್ಕೆ ಭಕ್ತರ ಬೇಸರ : ಪ್ರತಿವರ್ಷ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದ ಭಕ್ತಾದಿಗಳಿಗೆ ಈ ಬಾರಿ ವ್ಯವಸ್ಥೆ ಮಾಡದಿರುವುದು ಬೇಸರ ಉಂಟು ಮಾಡಿದೆ. ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಾಡುವ ಕೆಲವು ಮಂದಿ ಮಾತ್ರ ದೇವಿಯ ದರ್ಶನ ಮಾಡಬಹುದು. ಆದರೆ, ಅಂತರ್ಜಾಲ ಉಪಯೋಗಿಸದ ಲಕ್ಷಾಂತರ ಭಕ್ತರಿದ್ದಾರೆ.
ಹಾಗಾಗಿ, ಇಂತಹ ಭಕ್ತರಿಗೆ ದರ್ಶನ ಭಾಗ್ಯ ಸಿಗದೇ ವಂಚಿತರಾಗುವುದರಿಂದ ಆನ್‌ಲೈನ್ ವ್ಯವಸ್ಥೆ ಬೇಡ, ಪ್ರತಿವರ್ಷ 5ರಿಂದ 8ಲಕ್ಷ ಭಕ್ತರು ದರ್ಶನ ಮಾಡುತ್ತಿದ್ದರು. ಆದರೆ, ಈ ಬಾರಿ ಕನಿಷ್ಟ 3ರಿಂದ 4 ಲಕ್ಷ ಮಂದಿಗೆ ದರ್ಶನ ಭಾಗ್ಯ ಕೊಟ್ಟರೂ ಸಮಾಧಾನ ಅಂತಿದ್ದಾರೆ ಭಕ್ತರು.
ಕೋವಿಡ್-19 ತಡೆಗೆ ಆನ್‌ಲೈನ್ ಉತ್ತಮ ವ್ಯವಸ್ಥೆ : ಕೋವಿಡ್-19ರ ನಡುವೆ ಜೀವನ ಸಾಗಿಸುತ್ತಿರುವ ಹಾಸನ ಜನ ದೇವಸ್ಥಾನ ಬಾಗಿಲು ತೆಗೆದ್ರೆ ಸಾಮಾಜಿಕ ಅಂತರವಿಲ್ಲದೆ ದರ್ಶನ ಪಡೆಯಲು ಮುಂದಾಗುವುದು, ನಿಯಂತ್ರಣ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾರ್ವಜನಿಕ ದರ್ಶನ ನಿರ್ಬಂಧಿಸಿ ಅಂತರ್ಜಾಲದ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲು ಯೋಚಿಸಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಸಭೆಯಿಂದ ಮಾತ್ರ ಈ ಗೊಂದಲ ದೂರವಾಗಲಿದೆ.
ಧರ್ಮಸ್ಥಳ-ಶೃಂಗೇರಿ ರೀತಿ ಹಾಸನಾಂಬಕ್ಕೂ ವ್ಯವಸ್ಥೆ ಮಾಡಿ : ಈಗಾಗಲೇ ಕೋವಿಡ್-19 ಅನ್‌ಲಾಕ್ 5.0 ಬಳಿಕ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಕುಕ್ಕೆಸುಬ್ರಹ್ಮಣ್ಯ ಹೀಗೆ ಹಲವು ದೇವಾಲಯಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಭಕ್ತರಿಗೆ ದರ್ಶನ ನೀಡುತ್ತಿವೆ. ಅದೇ ರೀತಿ 10 ರಿಂದ13 ದಿನಗಳ ಕಾಲ ತೆರೆಯುವ ಹಾಸನಾಂಬೆಯ ದರ್ಶನವನ್ನು 5ರಿಂದ 8 ಲಕ್ಷ ಮಂದಿ ದರ್ಶನ ಪಡೆಯುತ್ತಿದ್ದರು.
ಈ ಬಾರಿ ಕನಿಷ್ಠ 3 ರಿಂದ 4 ಲಕ್ಷ ಮಂದಿಗಾದ್ರೂ ನೇರ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟರೇ ಭಕ್ತರ ಮನಸ್ಸಿಗೆ ಧಕ್ಕೆ ಉಂಟಾಗದು. ಹಾಗಾಗಿ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಭಕ್ತರ ಮನಸ್ಸಿಗೆ ಮತ್ತು ಭಾವನೆಗಳಿಗೆ ನೋವುಂಟಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರ್ತಿದೆ. ಕೋವಿಡ್-19 ಹಿನ್ನೆಲೆ ಮೊದಲ ಬಾರಿಗೆ ಹಾಸನಾಂಬ ದರ್ಶನದ ವಿಚಾರವಾಗಿ ಭಕ್ತರ ಮತ್ತು ಸಾರ್ವಜನಿಕರ ಹಾಗೂ ಜಿಲ್ಲಾಡಳಿತದ ನಡುವೆ ಗೊಂದಲ ಸೃಷ್ಟಿಯಾಗಿದೆ.
ಜಿಲ್ಲಾಡಳಿತ ಹಾಸನದ ಪ್ರಮುಖ ನಗರಗಳಲ್ಲಿ ಎಲ್ಇಡಿ ಅಳವಡಿಸಿ ದರ್ಶನದ ವ್ಯವಸ್ಥೆ ಮಾಡಲು ಚಿಂತನೆ ನಡೆಸಿದೆ. ಆದರೆ, ಇದಕ್ಕೆ ಭಕ್ತರು ಮಾತ್ರ ಬೇಸರ ವ್ಯಕ್ತಪಡಿಸುತ್ತಾರೆ. ಪ್ರತಿವರ್ಷ ದರ್ಶನ ಮಾಡುವ ಅರ್ಧದಷ್ಟು ಸಂಖ್ಯೆಯಲ್ಲಿ ಭಾರಿ ದರ್ಶನ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಡ ಹೇರುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.