ಹಾಸನ: ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಸನದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿದ್ದು, ಸುಖಾಸುಮ್ಮನೆ ಮನೆಯಿಂದ ಹೊರಬಂದು ಅಡ್ಡಾಡುತ್ತಿದ್ದ ವಾಹನ ಚಾಲಕರ ಮತ್ತು ಪೋಕರಿಗಳಿಗೆ ದಂಡಂ ದಶಗುಣಂ ಮಂತ್ರದಡಿ ಪೊಲೀಸರು ಬುದ್ಧಿ ಕಲಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ದಿನಬಳಕೆ ಮತ್ತು ಅಗತ್ಯವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟ ಬೆನ್ನಲ್ಲಿಯೇ ಸುಖಾಸುಮ್ಮನೆ ಕೆಲವು ಸ್ಥಳೀಯರು ಅಡ್ಡಾದಿಡ್ಡಿ ತಿರುಗುತ್ತಿದ್ದು, ಇಂಥವರಿಗೆ ಜಿಲ್ಲೆಯ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಇಂಧು ನಗರದ ಕಟ್ಟಿನಕೆರೆ ಮಾರುಕಟ್ಟೆ, ಮಹಾವೀರ ವೃತ್ತ ಹೋಟೆಲ್ ಸಾಮ್ರಾಟ್ ರಸ್ತೆ ಗಳಲ್ಲಿ ಕಾರಣವಿಲ್ಲದೇ ಓಡಾಡುತ್ತಿದ್ದ ಸ್ಥಳೀಯರಿಗೆ ಪೊಲೀಸರು ಲಾಠಿ ಬೀಸಿದ್ದಾರೆ. ಇದಲ್ಲದೇ ಮಂಗಳೂರು - ಬೆಂಗಳೂರು ನಡುವೆ ಸಂಚಾರ ಸ್ಥಗಿತಗೊಂಡಿದ್ದರೂ ಖಾಸಗಿ ವಾಹನಗಳು ಮಾತ್ರ ದುಪ್ಪಟ್ಟು ದರ ಪಡೆದರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಆಲೂರು ಪೊಲೀಸರು ವಾಹನ ಚಾಲಕರಿಗೆ ಲಾಠಿ ರುಚಿ ತೋರಿಸಿ ಜೊತೆಗೆ ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡುತ್ತಿದ್ದಾರೆ.
ಇದಲ್ಲದೆ ಸಕಲೇಶಪುರ ಸಮೀಪದ ಬಾಳ್ಳುಪೇಟೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಯುವಕನಿಗೆ ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ವಿಧಿಸಿದ್ದಾರೆ.