ಚನ್ನರಾಯಪಟ್ಟಣ : ಇತ್ತೀಚಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಕೊಲೆ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ರಾತ್ರಿ ವೇಳೆ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕು. ಪಟ್ಟಣ ಸುತ್ತ ಗಸ್ತು ತಿರುಗಬೇಕು. ಸಮಯಕ್ಕೆ ಸರಿಯಾಗಿ ಬಾರ್ ಹಾಗೂ ರೆಸ್ಟೋರೆಂಟ್ಗಳನ್ನು ಮುಚ್ಚಿಸಬೇಕು ಎಂದು ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದ್ದಾರೆ.
ಇಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ಕರೆದ ಅವರು, ಚನ್ನರಾಯಪಟ್ಟಣ ಜಿಲ್ಲೆಯ ಎಲ್ಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ತಾಲೂಕು. ಹೀಗಾಗಿ ಇಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತವೆ. ಆದ್ದರಿಂದ ಪೊಲೀಸರು ಹೆಚ್ಚು ನಿಗಾವಹಿಸಬೇಕು ಎಂದರು.
ಕಿರಣ್ ಕುಮಾರ್ ಆತ್ಮಹತ್ಯೆ ತುಂಬಾ ನೋವು ತಂದಿದೆ. ಇನ್ನು ಮುಂದೆ ಇಂತರ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಿ. ನಿಮಗೆ ಯಾವುದೇ ತೊಂದರೆ ಬಂದರೆ ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲವಿದೆ. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆ ಕೊಡಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಪಟ್ಟಣದ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿಸುತ್ತಿದ್ದೇವೆ. ಮೊದಲ ಹಂತದಲ್ಲಿ 26 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. 15 ಝೂಮ್ ಕ್ಯಾಮೆರಾಗಳು ಹಾಗೂ 12 ಸ್ಟಿಲ್ ಕ್ಯಾಮರಾಗಳನ್ನು ಪಟ್ಟಣಲ್ಲಿ ಅಳವಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಪ್ರಮುಖ ಸ್ಥಳಗಳಾದ ಬಾಗೂರು ರಸ್ತೆ, ಟಿಪ್ಪು ಸರ್ಕಲ್, ಗಾಂಧಿ ಸರ್ಕಲ್, ಪೊಲೀಸ್ ಸ್ಟೇಷನ್ ಸರ್ಕಲ್, ಆಸ್ಪತ್ರೆ ಸರ್ಕಲ್, ನವೋದಯ ಸರ್ಕಲ್, ಬಸ್ ಸ್ಟ್ಯಾಂಡ್ ಮುಂತಾದ ಸ್ಥಳಗಳಿಗೆ ವೈರ್ಲೆಸ್ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದೇವೆ. ಯಾವುದೇ ಪ್ರಕರಣ ಕಂಡಲ್ಲಿ ಸ್ಥಳದಲ್ಲಿ ಇರುವ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಮಾಹಿತಿ ನೀಡಿ ಪ್ರಕರಣಗಳನ್ನು ಆದಷ್ಟು ಬೇಗ ಹಿಡಿಯಲು ಅನುಕೂಲವಾಗುವಂತೆ ಮಾಡುತ್ತಿದ್ದೇವೆ ಎಂದರು.