ಹಾಸನ: ದೇಶದ ಪ್ರಜ್ಞಾವಂತ ಸಮಾಜದಲ್ಲಿ ಹತ್ತು ಜನರಲ್ಲಿರುವ ನೈತಿಕ ಶಕ್ತಿ ಒಂದು ಕೋಟಿ ಜನರಿಗಿಂತ ಹೆಚ್ಚಿನದ್ದಾಗಿರುತ್ತದೆಯೆಂದು ಹಿರಿಯ ಸಾಹಿತಿ ಮೊಗಳ್ಳಿ ಗಣೇಶ್ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಭಿರುಚಿ ಪ್ರಕಾಶನ ಮೈಸೂರು, ಕಸಾಪ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿ.ಸುವರ್ಣ ಶಿವಪ್ರಸಾದ್ ಬರೆದಿರುವ ಒಂದ್ಕಥೆ ಕಾದಂಬರಿಯನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿದ ಮೊಗಳ್ಳಿ ಗಣೇಶ್, ಒಂದು ಪ್ರಜ್ಞಾವಂತ ಸಮಾಜದಲ್ಲಿ 10 ಜನರಲಿ ಇರುವ ನೈತಿಕೆ ಶಕ್ತಿ ಒಂದು ಕೋಟಿ ಜನರಿಗಿಂತ ಹೆಚ್ಚಿನದೆಂದರು.
ಕಥೆ ಯಾವುದೇ ಭಾಷೆಯಿಂದ, ಸನ್ನಿವೇಶದಿಂದ ಹಾಗೂ ಯಾವುದೇ ಮೂಲದಿಂದ ಬಂದಿರಬಹುದು, ಎಲ್ಲವು ಒಂದ್ಕತೆಯಾಗಿರುತ್ತದೆ. ಈ ಕಾದಂಬರಿ ನಮ್ಮ ಕಾಲದ ಮತ್ತು ಹಳ್ಳಿಗಳ ಸಂಕಟದ ಒಂದು ಕಥೆಯಾಗಿದೆ. ಇಂದಿನ ತಲೆಮಾರಿನ ಲೇಖಕರು ಹೇಗೆ ಗ್ರಹಿಸುತ್ತಿದ್ದಾರೆಂಬುದನ್ನು ಹಾಗೂ ಸಮಾಜದಲ್ಲಿ ಏನಾದರೂ ಒಳ್ಳೆಯದನ್ನು ಕೊಡಬೇಕೆಂಬ ನಿಟ್ಟಿನಲ್ಲಿ ಉತ್ತಮ ಮನಸ್ಸಿನಲ್ಲಿ ಕಥೆಯನ್ನು ಕಟ್ಟುತ್ತಾ ಭಾವನಾತ್ಮಕವಾಗಿ ವಸ್ತು ಸ್ಥಿತಿಯನ್ನು ವಿವರಿಸಲಾಗಿದೆಯೆಂದರು.
ಇನ್ನೂ ನೋಡುವುದಕ್ಕೆಲ್ಲಾ ಸುಂದರ ಆದರೆ ಅಂತರಂಗ ಬರ್ಬರ. ಬಹಳ ಅಂತಃಕರಣವಾದ ಭಾವನಾತ್ಮಕ ಸಂಬಂಧ ಇದ್ದು, ಅಂತಹ ಸುಂದರ ಲೋಕವನ್ನು ಕಳೆದುಕೊಳ್ಳುತ್ತಾ ನೋಡುವುದಕ್ಕೆ ಮಾತ್ರ ಬಲಿಷ್ಠವಾಗಿ, ಸುಂದರವಾಗಿ ಕಾಣುತ್ತಿದ್ದೇವೆ. ಇನ್ನೊಬ್ಬನನ್ನು ನೋಡಿ ಸಹಿಸದಂತಹ ಮನುಷ್ಯನ ಒಳಗೆ ಬಹಳ ಕೆಟ್ಟ ಹಸಿವನ್ನು ತುಂಬಿಕೊಂಡಿದ್ದೇವೆ. ದ್ವೇಷ, ಹಿಂಸೆ, ಅಸೂಯೆಯಂತಹ ವಿಕೃತವಾದ ಹಾಗೂ ಬರ್ಬರವಾದ ಒಂದು ವ್ಯಕ್ತಿತ್ವ ಆಧುನಿಕ ಭಾರತದಲ್ಲಿ ರೂಪಗೊಳ್ಳುತ್ತಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಭಾರತದಲ್ಲಿ ಅತ್ಯಂತ ಬರ್ಬರವಾದ ಮಾನವ ಸಂಬಂಧಗಳು ಬೆಳೆಯುತ್ತಿದ್ದು, ನೈತಿಕತೆಯನ್ನು ಕಳೆದುಕೊಂಡ ದೇಶ ದಿವಾಳಿಯಾಗಿದೆ ಎಂದರು. ಭಾರತದಲ್ಲಿ ಆರ್ಥಿಕ ವ್ಯವಸ್ಥೆ ಹೇಗೆಂಬುದನ್ನು ಕಾದಂಬರಿಯಲ್ಲಿ ತೋರಿಸಲಾಗಿದೆ. ನಮ್ಮ ಸಾಹಿತ್ಯ, ಸಂಸ್ಕೃತಿ, ಆಲೋಚನೆ, ಸಂಶೋಧನೆಗಳು ಹಾಗೂ ಹೊಸ ಹೊಸ ಆವಿಷ್ಕಾರಗಳು ಇವೆಲ್ಲಾ ಕೊನೆಗೆ ಅಂತಿಮವಾಗಿ ಇರುವ ನೈಜ ದಾರಿಗೆ ಹೋಗಬೇಕಾಗಿದೆಯೆಂದು ಸಲಹೆ ನೀಡಿದರು. ಹೊಸ ಸಮಾಜಕ್ಕೆ ಕಥೆಯನ್ನು ಹೇಳಿಕೊಡಬೇಕಾದವರು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆಯೆಂದು ಸಲಹೆ ನೀಡಿದರು.