ಹಾಸನ: ನಗರದ ಹೊರ ವಲಯದ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 254, ಹಳೇ ಸರ್ವೆ ನಂಬರ್ 244ರಲ್ಲಿ ಮಿಲಿಟರಿ, ವಿಧವೆಯರಿಗೆ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟರುವ ಜಾಗದಲ್ಲಿ ಸತ್ಯಮಂಗಲದ ಅರ್ಹ ನಿವೇಶನ ರಹಿತ ಗ್ರಾಮಸ್ಥರಿಗೆ ನಿವೇಶನ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೇಶನ ರಹಿತರಿಗೆ ಸುಮಾರು 4.20 ಗುಂಟೆ ಜಾಗವನ್ನು ಮೀಸಲಿಟ್ಟು ಹಲವು ವರ್ಷಗಳೇ ಕಳೆದರೂ, ಜಿಲ್ಲಾಡಳಿತ ನಿವೇಶನ ವಿತರಣೆ ಮಾಡದ ಹಿನ್ನಲೆಯಲ್ಲಿ ನಿವಾಸಿಗಳೂ ಸೇರಿದಂತೆ ಸುತ್ತಮುತ್ತಲ ನಿರ್ಗತಿಕರು ನೂರಾರು ಸಂಖ್ಯೆಯಲ್ಲಿ ರಾತ್ರೋರಾತ್ರಿ ಗುಡಿಸಲು ಹಾಕಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಹಾಗೂ ತಹಶೀಲ್ದಾರ್ ಶಿವಶಂಕರಪ್ಪ ನೇತೃತ್ವದಲ್ಲಿ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಗುಡಿಸಲು ಹಾಕಿಕೊಂಡವರನ್ನು ಮನವೊಲಿಸಿದ್ದಾರೆ. ಗುಡಿಸಲು ಹಾಕಿಕೊಂಡಿರುವುದು ಕಾನೂನು ಬಾಹಿರವಾಗಿದ್ದು, ಇವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಿದರು.
ಸತ್ಯಮಂಗಲ ಗ್ರಾಮದಲ್ಲಿಯೇ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದರೂ ನಮಗೆ ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದೇವೆ. ಬಡವರಾದ ನಮಗೆ ನಿವೇಶನ ನೀಡಬೇಕು ಎಂದು ಮನವಿ ಮಾಡಿದ್ದರೂ, ಈ ಸರ್ವೆ ನಂಬರ್ನಲ್ಲಿ ಉಳ್ಳವರು, ಮನೆ ಇರುವ ನೌಕರರೇ ನಿವೇಶನ ಪಡೆದುಕೊಳ್ಳಲು ಹುನ್ನಾರ ನಡೆಸಿ ಕೋರ್ಟಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಜಿಲ್ಲಾಡಳಿತ ಇದನ್ನು ಸರಿಯಾಗಿ ಪರಿಶೀಲಿಸಿ ಗ್ರಾಮಸ್ಥರಿಗೆ ಮೊದಲ ಆದ್ಯತೆ ನೀಡಿ, ಬಡವರಿಗೆ ನಿವೇಶ ನೀಡಬೇಕು ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ರಾತ್ರೋರಾತ್ರಿ ತಾ ಮುಂದು ನಾ ಮುಂದು ಎಂದು ಹಲವರು ಅಡಿಕೆ ಸೋಗೆ, ತಗಡುಗಳಿಂದ ಹಾಕಿಕೊಂಡಿದ್ದ ಗುಡಿಸಲುಗಳನ್ನು ಬೆಳಗ್ಗೆ ಅಧಿಕಾರಿಗಳು, ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿದ್ದನ್ನು ನೋಡಿ ಸ್ಥಳೀಯರು ಇನ್ನೂ ಎಷ್ಟು ದಿನಗಳು ನಿವೇಶನಕ್ಕೆ ಕಾಯಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.