ಹಾಸನ/ಅರಸೀಕೆರೆ: ಉತ್ತರ ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆ ರಾಯನ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡರೆ ಇತ್ತ ಅರಸೀಕೆರೆ ತಾಲೂಕಿನಲ್ಲಿ ಮಾತ್ರ ವರುಣ ಮತ್ತು ಸೂರ್ಯ ದೇವ ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದಾರೆ.
ಅರಸೀಕೆರೆಯಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗುತ್ತಿದೆ. ಹೆಚ್ಚು ಮಳೆಯಿಲ್ಲದ ಕಾರಣ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬುವುದಿರಲಿ ಮನೆ ಮುಂದಿನ ಚರಂಡಿ ಮೋರಿಗಳಲ್ಲೂ ಸಹ ನೀರು ತುಂಬಿ ಹರಿಯುತ್ತಿಲ್ಲ. ಜಿಲ್ಲೆಯಲ್ಲಿ ಸಕಲೇಶಪುರ ಸೇರಿದಂತೆ ಐದು ತಾಲೂಕುಗಳಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ, ಅರಸೀಕೆರೆಯಲ್ಲಿ ಶಾಲಾ - ಕಾಲೇಜುಗಳು ಎಂದಿನಿಂತೆ ನಡೆಯುತ್ತಿವೆ.
ಒಂದೆಡೆ ನಾಡಿನ ಬಹುತೇಕ ಕಡೆ ಜನ ಮಳೆ ನಿಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅರಸೀಕೆರೆಯ ಮಂದಿ ಮಾತ್ರ ಬಾರೋ ಬಾರೋ ಮಳೆರಾಯ ಅಂತ ಪ್ರಾರ್ಥಿಸುತ್ತಿದ್ದಾರೆ. ಇನ್ನಾದರೂ ಮಳೆರಾಯ ಉತ್ತರ ಕರ್ನಾಟಕದಿಂದ ತನ್ನ ಚಿತ್ತವನ್ನ ಇತ್ತ ಹರಿಸುತ್ತಾನಾ ನೋಡಬೇಕು.