ಹಾಸನ: ಕೋವಿಡ್-19 ಸೋಂಕು ಹೊಸ ರೂಪ ಪಡೆದಿರುವ ಆತಂಕದ ಬೆನ್ನಲ್ಲೇ ಇಂಗ್ಲೆಂಡ್ನಿಂದ ಜಿಲ್ಲೆಗೆ ಆಗಮಿಸಿರುವ ಇಬ್ಬರನ್ನು ಗುರುತಿಸಿ ಹೋಂ ಕ್ವಾರಂಟೈನ್ನಲ್ಲಿ ಇರಿಸಿಲಾಗಿದೆ.
ಮನೆಗಳಲ್ಲಿ ಇಬ್ಬರನ್ನೂ ಪ್ರತ್ಯೇಕವಾಗಿರಿಸಿ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷಾ ವರದಿಗಾಗಿ ಕಾಯಲಾಗಿತ್ತು. ಇಂದು ಪರೀಕ್ಷೆ ವರದಿ ಬಂದಿದ್ದು, ಇಬ್ಬರಿಗೂ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಇಂದು ಜಿಲ್ಲೆಗೆ ಅಗಮಿಸಿದವರಲ್ಲಿ ಒಬ್ಬರು 29 ವರ್ಷದ ವಿಜ್ಞಾನಿಯಾಗಿದ್ದು, ಏಕ್ಸ್ಟರ್ (Exeter ) ಪ್ರದೇಶದಿಂದ ಹಾಸನ ತಾಲೂಕಿಗೆ ಆಗಮಿಸಿದ್ದಾರೆ. ಮತ್ತೊಬ್ಬರು 48 ವರ್ಷದ ಉದ್ಯೋಗಿ ಲಂಡನ್ನಿಂದ ಅರಕಲಗೂಡು ತಾಲೂಕಿಗೆ ಆಗಮಿಸಿದ್ದಾರೆ. ಇಬ್ಬರಿಗೂ ಯಾವುದೇ ರೋಗ ಲಕ್ಷಣ ಇಲ್ಲ. ಜೊತೆಗೆ ಜಿಲ್ಲಾಡಳಿತದಿಂದಲೂ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.