ಹಾಸನ: ಜಾತಿ ಮತ ಧರ್ಮ ತಾರತಮ್ಯ ಇಲ್ಲದೆ ದರ್ಶನ ನೀಡುವಂತಹ ಹಾಸನಾಂಬ ದೇಗುಲಕ್ಕೆ ಮುಸ್ಲಿಂ ದಂಪತಿ ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವಾಲಯದ ಗರ್ಭಗುಡಿಗೆ ಆಗಮಿಸಿ ದೇವಿಯ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹಾಸನಾಂಬೆಯನ್ನು ಮುಸ್ಲಿಂ ದೇವತೆ ಅಂತಲೂ ಹೇಳಲಾಗುತ್ತೆ. ಇದೊಂದು ಕುತೂಹಲ ಮೂಡಿಸುವಂತ ಕಥೆಯಾಗಿದ್ದು, ಇಲ್ಲಿ ಹಿಂದೆ ಹೆಚ್ಚು ಮುಸ್ಲಿಂ ಬಾಂಧವರು ವಾಸವಾಗಿದ್ದರು. ಮುಸ್ಲಿಂ ಮಹಿಳೆವೋರ್ವಳು ತನ್ನ ಅತ್ತೆಯ ಕಿರುಕುಳ ತಾಳಲಾರದೆ ಹಾಸನಾಂಬೆಯ ದೇಗುಲದಲ್ಲಿ ಬಂದು ಅವಿತು ಕುಳಿತುಕೊಂಡಿದ್ದಳಂತೆ. ಬಳಿಕ ಕುಟುಂಬದವರು ಆಕೆಯನ್ನು ಹುಡುಕಿಕೊಂಡು ಬಂದ ಸಂದರ್ಭದಲ್ಲಿ ಹಾಸನಾಂಬೆಯ ಬಾಗಿಲು ಮುಚ್ಚಿಕೊಂಡು ಅಲ್ಲಿಯೇ ಲೀನವಾದಳಂತೆ. ವರ್ಷದ ಬಳಿಕ ಬಾಗಿಲು ತೆರೆದಾಗ ಆಕೆಯಾಗಲಿ ಅಥವಾ ಆಕೆಯ ಸುಳಿವು ಸಹ ಇರಲಿಲ್ಲ. ಆದ್ರೆ ಕೇವಲ ದೀಪ ಉರಿಯುತ್ತಿತ್ತಂತೆ. ಆಗ ಆಕೆಯನ್ನು ಹಸನಬಿ ಎನ್ನುತ್ತಾ ಮುಸ್ಲಿಂರು ಕೂಡ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದರು ಎನ್ನುವ ಪ್ರತೀತಿ ಇದೆ.
ಈ ನಂಬಿಕೆಯ ಆಧಾರದ ಮೇಲೆ ಮುಸ್ಲಿಂ ಭಕ್ತರು ಕೂಡ ಹಾಸನಾಂಬ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.