ಹಾಸನ: ಕುಡಿದ ಮತ್ತಿನಲ್ಲಿಯೇ ಸರಸ ನಡೆಸಿ ಬಳಿಕ ಬೆತ್ತಲಾಗಿದ್ದ ಪ್ರಿಯಕರನನ್ನು ದೊಣ್ಣೆಯಿಂದ ಹೊಡಿದು ಕೊಲೆ ಮಾಡಿದ ಪ್ರೇಯಸಿಯೊಬ್ಬಳು, ತಾನೂ ಕೂಡ ಅರೆ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿರುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅರಕಲಗೂಡು ತಾಲೂಕಿನ ಬಸವಪಟ್ಟಣ ನಿವಾಸಿ ಮಂಜು (43) ಕೊಲೆಯಾದ ದುರ್ದೈವಿಯಾಗಿದ್ದು, ಹೊಳೆನರಸೀಪುರದ ವಸಂತಾ ಎಂಬ ಮಹಿಳೆಯೇ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಡಿಸೆಂಬರ್ 1ರ ರಾತ್ರಿ ನ್ಯೂ ಮದೀನಾ ಹೊಟೆಲ್ ಮುಂದೆ ಈ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದ ಮೇರೆಗೆ ಹೊಳೆನರಸೀಪುರ ಪೊಲೀಸರು ಹತ್ಯೆ ಪ್ರಕರಣ ಬೇಧಿಸಿದ್ದಾರೆ.
ಪಾನಮತ್ತರಾಗಿದ್ದ ಇಬ್ಬರು ಪರಸ್ಪರ ಬೆತ್ತಲಾಗಿ ಮದೀನಾ ಹೋಟೆಲ್ ಮುಂಭಾಗ ಲೈಂಗಿಕ ಕ್ರಿಯೆ ನಡೆಸಿದ್ದು, ಬಳಿಕ ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಹಣ ಕೊಡದ ಹಿನ್ನೆಲೆಯಲ್ಲಿ ವಸಂತಾ ಪಕ್ಕದಲ್ಲಿದ್ದ ದೊಣ್ಣೆಯಿಂದ ಮಂಜುವಿನ ತಲೆಗೆ ಮತ್ತು ಇತರ ಭಾಗಗಳಿಗೆ ಹೊಡಿದು ಕೊಲೆ ಮಾಡಿದ್ದಾಳೆ. ಹಾಗೆಯೇ ಭಯದಲ್ಲಿ ಅರೆ ಬೆತ್ತಲಾಗಿಯೇ ಸ್ಥಳದಿಂದ ಓಡಿ ಹೋಗಿದ್ದಾಳೆ ಎನ್ನಲಾಗಿದೆ.
ಈ ಎಲ್ಲಾ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸೋಮವಾರ ಪುರಸಭೆ ಮಳಿಗೆಯ ಮುಂದೆ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿಯೇ ಮಂಜು ಮೃತದೇಹ ಪತ್ತೆಯಾಗಿತ್ತು. ಬಳಿಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸಿಪಿಐ ಅಶೋಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿ ವಂಸತಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.