ಹಾಸನ: ರಾಜ್ಯಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹಾಸನ ವೈದ್ಯಕೀಯ ಬೋಧಕ ಆಸ್ಪತ್ರೆಯ ಐಸೊಲೇಟೆಡ್ ವಾರ್ಡ್ಗೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ಪರಿಶೀಲಿಸಿದರು. ನೂತನ ಕಟ್ಟಡದಲ್ಲಿ ವಿಶೇಷವಾಗಿ ಸಿದ್ಧಗೊಂಡಿರುವ ವಾರ್ಡ್ ಪರಿಶೀಲಿಸಿದ ಸಂಸದ ಪ್ರಜ್ವಲ್, ವಾರ್ಡ್ಗೆ ಭೇಟಿ ನೀಡಿ ಅರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ಪ್ರತಿನಿತ್ಯ ಹೊರ ದೇಶದಿಂದ ಬರುವ ಪ್ರವಾಸಿಗರನ್ನು ಹಾಗೂ ಸ್ಥಳೀಯರನ್ನ ತಪಾಸಣೆ ಮಾಡುವ ಕಾರ್ಯವನ್ನು ಮಾಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು. ಅಗತ್ಯ ಬಿದ್ದರೆ ಸಂಸದರ ವೇತನ ನೀಡಲು ಸಿದ್ಧನಿದ್ದೇನೆ. ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ರಜೆ ಪಡೆಯದೇ ಕೆಲಸ ನಿರ್ವಹಿಸಿ ಎಂದು ಮನವಿ ಮಾಡಿದರು. ಸಿಇಓ ಪರಮೇಶ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕೊರೊನಾ ವೈರಸ್ ಶಂಕಿತರನ್ನು ತಪಾಸಣೆ ಮಾಡಲಾಗಿದ್ದು, ಅವರುಗಳಿಗೆ ಯಾವುದೇ ಸೋಂಕು ಇಲ್ಲವೆಂದು ವೈದ್ಯಕೀಯ ವರದಿ ದೃಢಪಡಿಸಿ ವೈರಸ್ ಮುಕ್ತ ಎಂದು ಘೋಷಿಸಿದ್ದಾರೆ.