ಹಾಸನ: ಆಹಾರ ಅರಸಿ ಬಂದ 38 ಮಂಗಗಳನ್ನು ನಿರ್ದಯವಾಗಿ ವಿಷವಿಕ್ಕಿ ಕೊಂದು ಹಾಕಿರುವ ಅತ್ಯಂತ ಅಮಾನವೀಯ ಘಟನೆ ಬೇಲೂರು ತಾಲೂಕಿನ ಚೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟ ಪುಟ್ಟ ಮರಿಗಳ ಜೊತೆಗೆ ಸಾಮೂಹಿಕವಾಗಿ ಇಲ್ಲಿ ಮೂಕ ವನ್ಯಜೀವಿಗಳ ಹತ್ಯೆಯಾಗಿದೆ.
ಚೌಡನಹಳ್ಳಿ ಗ್ರಾಮಸ್ಥರು ನಿನ್ನೆ ರಾತ್ರಿ ತಮ್ಮೂರಿಗೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ದೊಡ್ಡದಾದ ಚೀಲ ಬಿದ್ದಿರೋದನ್ನು ಗಮನಿಸಿದ್ದಾರೆ. ಈ ಸಂದರ್ಭ ಸಮೀಪ ಹೋಗಿ ಗಮನಿಸಿದಾಗ ಒಳಗೆ ಪ್ರಾಣಿಗಳ ಚೀರಾಟ ಕೇಳಿಸಿದೆ. ಊರಿನ ಜನರೆಲ್ಲಾ ಸೇರಿ ಚೀಲ ಬಿಚ್ಚಿ ನೋಡಿದಾಗ 60ಕ್ಕೂ ಹೆಚ್ಚು ಮಂಗಗಳು ಅದರೊಳಗೆ ಬಂಧಿಯಾಗಿರುವುದು ಗೊತ್ತಾಗಿದೆ. ಹೊರತೆಗೆದು ನೋಡಿದ್ರೆ 38 ಮಂಗಗಳು ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಕೋತಿಗಳು ಸಾವು ಬದುಕಿನ ನಡುವೆ ನರಳಾಟ ಅನುಭವಿಸುತ್ತಿದ್ದವು. ಗ್ರಾಮಸ್ಥರು ನಡುರಾತ್ರಿಯಲ್ಲೇ ಅರಣ್ಯ ಇಲಾಖೆ, ಪೊಲೀಸ್ ಹಾಗು ಪಶು ವೈದ್ಯರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಿತ್ರಾಣಗೊಂಡಿದ್ದ ಕೋತಿಗಳಿಗೆ ನೀರು, ಆಹಾರ ನೀಡಿ ಬದುಕಿಸುವ ಪ್ರಯತ್ನ ಮಾಡಿದ್ರೂ ಹಲವು ಮಂಗಗಳು ಸಾವಿಗೀಡಾದವು.
ಮೇಲ್ನೋಟಕ್ಕೆ ವಿಷ ಹಾಕಿ ಕೊಂದಿರುವಂತಿದೆ:
ನಿನ್ನೆ ರಾತ್ರಿ 10 ಗಂಟೆಯ ಸುಮಾರಿನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಂಗಳನ್ನು ಇಲ್ಲಿ ಎಸೆದು ಹೋಗಿದ್ದಾರೆ. ಮೃತಪಟ್ಟಿರೋ ಕೋತಿಗಳ ಮೃತದೇಹ ಹಸಿರು ಬಣ್ಣಕ್ಕೆ ತಿರುಗಿದ್ದು ವಿಷಪ್ರಾಷನ ಮಾಡಿ ಕೊಂದಿರಬಹುದು ಎಂದು ಶಂಕಿಸಲಾಗಿದೆ. ಸಾಮೂಹಿಕವಾಗಿ ವಿಷ ಉಣಿಸಿ ಅವು ನಿತ್ರಾಣಗೊಂಡ ಬಳಿಕ ಹಲ್ಲೆ ನಡೆಸಿ ಚೀಲಕ್ಕೆ ತುಂಬಿ ತಂದು ಬಿಸಾಡಿದ್ದಾರೆ.
ಸುತ್ತಮುತ್ತಲ ಗ್ರಾಮಗಳಲ್ಲಿ ಎಲ್ಲಿಯೂ ಕೋತಿಗಳಿಲ್ಲ:
ಚೌಡನಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಎಲ್ಲಿಯೂ ಕೋತಿಗಳಿಲ್ಲ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಂಗಗಳನ್ನು ಕೊಂದು ತಂದು ಹಾಕಿದ್ದು ಯಾರು? ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಅನ್ನೋದು ಸದ್ಯದ ಪ್ರಶ್ನೆ. ಮೇಲ್ನೋಟಕ್ಕೆ ಕೋತಿಗಳ ಆಹಾರಕ್ಕೆ ವಿಷ ಹಾಕಿ ಅವುಗಳ ಮೇಲೆ ಹಲ್ಲೆಯನ್ನೂ ಮಾಡಿ ಚೀಲದಲ್ಲಿ ತುಂಬಿ ತಂದು ಬಿಸಾಡಿದಂತಿದೆ.ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರೋ ಸ್ಥಳೀಯರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ:
ಸ್ಥಳಕ್ಕೆ ಬಂದ ಬೇಲೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ಮೃತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ಆರೋಪಿಗಳ ಪತ್ತೆಯ ಜೊತೆಗೆ ಮಂಗಗಳ ಸಾವಿನ ಕಾರಣ ತಿಳಿಯಲು ಮುಂದಾಗಿದ್ದಾರೆ.
ಗ್ರಾಮಸ್ಥರಿಂದ ಅಂತ್ಯಸಂಸ್ಕಾರ:
ತಮ್ಮೂರ ಸಮೀಪವೇ ವಾಯುಪುತ್ರನ ಅವತಾರ ಎಂದು ನಂಬಲಾಗುವ ಮಂಗಗಳ ಮಾರಣ ಹೋಮದಿಂದ ಬೆಚ್ಚಿಬಿದ್ದ ಜನರು, ಮೃತಪಟ್ಟ ಮಂಗಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಅಧಿಕಾರಿಗಳ ಜೊತೆ ಸೇರಿ ಅಂತಿಮ ವಿಧಿ ವಿಧಾನವನ್ನೂ ನೆರವೇರಿಸಿದರು.
ಆಹಾರಕ್ಕಾಗಿ ಊರಿಂದೂರು, ತೋಟದಿಂದ ತೋಟ ಅಲೆಯುತ್ತಾ ಬದುಕಿಗಾಗಿ ಹೋರಾಟ ನಡೆಸುವ ಮೂಕ ಪ್ರಾಣಿಗಳು ಬೆಳೆ ಹಾಳು ಮಾಡುತ್ತವೆ ಅನ್ನೋ ಕಾರಣದಿಂದಲೇ ಈ ಹತ್ಯೆ ನಡೆದಿರಬಹುದೆಂದು ಹೇಳಲಾಗುತ್ತಿದೆ.