ಹಾಸನ: ಶಾಸಕ ಶಿವಲಿಂಗೇಗೌಡ ಹಾಗೂ ಎಂಎಲ್ಸಿ ಗೋಪಾಲಸ್ವಾಮಿ ನಡುವೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಟಾಪಟಿ ನಡೆದಿದೆ.
ಕೋವಿಡ್ 19ರ ಸಭೆಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಮಾತಾಡುತ್ತಿದ್ದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರಿಗೆ, ಎಂಎಲ್ಸಿ ಗೋಪಾಲಸ್ವಾಮಿ ಶಾಸಕರಾಗಿ ಎಲ್ಲವನ್ನೂ ನೀವೇ ಮಾತನಾಡಿದರೆ ನಮಗೂ ಮಾತನಾಡಲು ಅವಕಾಶ ಕೊಡಿ ಎಂದು ಕೋಪದಲ್ಲಿ ಮಾತನಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕ ಶಿವಲಿಂಗೇಗೌಡ, ನಾನೇನು ಕೆಟ್ಟದ್ದನ್ನು ಮಾತನಾಡುತ್ತಿದ್ದೇನೆ. ನನ್ನ 20 ವರ್ಷದ ಅನುಭವದ ಮಾತನ್ನು ಇಲ್ಲಿ ಹೇಳುತ್ತಿದ್ದೇನೆ. ನನ್ನ ಮಾತನಾಡಬೇಡಿ ಎಂದು ಹೇಳಿದರೆ ಸಭೆಯನ್ನು ನೀವೇ ಮುಂದುವರಿಸಿಕೊಂಡು ಹೋಗಿ, ನಾನು ಸಭೆಯಿಂದ ಹೊರ ನಡೆಯುತ್ತೇನೆ ಎಂದು ಕೂಗಾಡಿದರು.
ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಎಂಎಲ್ಸಿ ಗೋಪಾಲಸ್ವಾಮಿ, ನೀವು ತಪ್ಪು ಮಾತನಾಡುತ್ತಿಲ್ಲ. ಆದರೆ ಎಲ್ಲರಿಗೂ ಮಾತನಾಡಲು ನಿರ್ದಿಷ್ಟ ಸಮಯ ಕೊಡಿ. ಒಬ್ಬರೆ ಮಾತನಾಡುತ್ತಾ ಹೋದರೆ ನಾವು ಯಾಕೆ ಸಭೆಗೆ ಬರಬೇಕು ಎಂದು ಮರು ಉತ್ತರ ನೀಡುವ ಮೂಲಕ ಸುಮಾರು 50 ನಿಮಿಷಗಳ ಕಾಲ ಶಾಸಕ ಹಾಗೂ ಎಂಎಸ್ಸಿ ನಡುವೆ ವಾಕ್ಸಮರ ಮುಂದುವರೆಯಿತು. ಬಳಿಕ ವೇದಿಕೆಯಲ್ಲಿದ್ದ ಸಂಸದ ಪ್ರಜ್ವಲ್ ರೇವಣ್ಣ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿ ವಾಕ್ಸಮರಕ್ಕೆ ತೆರೆ ಎಳೆದರು.