ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹಾಕಿರೋ ಸವಾಲು ಸ್ವೀಕಾರ ಮಾಡುತ್ತೇನೆ. ನಾನು ಮುಂದಿನ 2023ರ ಚುನಾವಣೆ ಗೆಲ್ಲುತ್ತೇನೆ ಎನ್ನುವ ಮೂಲಕ ಶಾಸಕ ಪ್ರೀತಂ ಜೆ. ಗೌಡ ಅವರು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣಗೆ ತಿರುಗೇಟು ನೀಡಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ನನಗಿಂತ ಚಿಕ್ಕವರು, ಏಕವಚನದಲ್ಲಿ ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಮನೆ ಮತ್ತು ರಾಜಕೀಯ ಪಕ್ಷ ನನಗೆ ಒಂದು ಸಂಸ್ಕಾರ ಬೆಳೆಸಿಕೊಟ್ಟಿದೆ. ನಾನು 10 ವರ್ಷದ ಬಾಲಕನಿಗೂ ಕೂಡ ಏಕವಚನದಲ್ಲಿ ಹೋಗು, ಬಾ ಎಂದು ಹೇಳುವುದಿಲ್ಲ. ಗೌರವ ಕೊಟ್ಟು, ಗೌರವ ತೆಗೆದುಕೊಳ್ಳುತ್ತೇವೆ. ಸಂಸದರು ಆ ರೀತಿ ಮಾತನಾಡಿದ್ದಾರೆ ಎಂದರೆ ಅವರ ಮನಸ್ಥಿತಿಯನ್ನು ಅದು ತೋರಿಸುತ್ತದೆ. ಹಾಗಾಗಿ, ನಾನು ಹೆಚ್ಚು ಮಾತನಾಡುವುದಿಲ್ಲ. ಮಾನ್ಯ ಸಂಸದರಿಗೆ ಸಾರ್ವಜನಿಕರೇ ಮುಂದಿನ ದಿನದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಸುತ್ತಾರೆ ಎಂದರು.
ಇದು ಸಂಸದರ ಹತಾಶೆಯ ಮನೋಭಾವನೆ ತೋರಿಸುತ್ತದೆ. ಸಾರ್ವಜನಿಕವಾಗಿ ಮತ್ತು ಅವರ ಕಾರ್ಯಕರ್ತರನ್ನು ಯಾವ ರೀತಿ ಮಾತನಾಡಿಸಬೇಕು ಎಂಬ ಬಗ್ಗೆ ಒಂದು ತರಬೇತಿ ತೆಗೆದುಕೊಂಡರೆ ಒಳ್ಳೆಯದು. ಅವರ ತಂದೆಯವರು ಕಾರ್ಯಕರ್ತರನ್ನು ಕುಡುಕರು, ರೌಡಿಶೀಟರ್ ಎನ್ನುತ್ತಾರೆ. ಅವರ ಮಗ ಅವರಿಗಿಂತ ಮುಂಚೆ ಚುನಾಯಿತರಾದ ಪ್ರತಿನಿಧಿಗೆ ಏಕವಚನದಲ್ಲಿ ಮಾತನಾಡುತ್ತಾರೆ. ನನಗಿಂತ ಆರೇಳು ವರ್ಷ ಚಿಕ್ಕವರಿದ್ದಾರೆ. ಇವೆಲ್ಲ ಅವರ ಸಂಸ್ಕಾರವನ್ನು ತೋರಿಸಿ ಕೊಡುತ್ತದೆ. ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕಾಗಿರುವುದು ಅವರ ವಯಕ್ತಿಕ ವಿಚಾರ ಆಗಿರುವುದರಿಂದ ನಾನು ಏಕೆ ಹೆಚ್ಚು ಗಮನ ಕೊಡಲಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: 'ಯಾವನ್ರೀ ಅವನು?..': ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ಗರಂ
ನಾನು ಚುನಾವಣೆ ನಿಲ್ಲುತ್ತಿರುವುದು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಎಂಬುದು ಅವರಿಗೆ ಮಾಹಿತಿ ಇಲ್ಲ. ಪಾಪ ತಾತನ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದರೆ ಹೀಗೆಯೇ ಆಗುವುದು. ಜಿಲ್ಲೆಯ ಜನರು ನನಗೆ ಮತ ಹಾಕುವುದಿಲ್ಲ. ಹಾಸನದ ವಿಧಾನಸಭಾ ಕ್ಷೇತ್ರದ ಜನರು ನನಗೆ ಮತ ಹಾಕುವುದು. ನಾನು ನಿಂತಿರುವುದು ಎಂಎಲ್ಎ ಚುನಾವಣೆಗೆ, ಅವರಿಗೆ ಸ್ವಲ್ಪ ಮಾಹಿತಿ ಕೊರತೆ ಇರಬಹುದು. ರಾಜಕೀಯದ ಪ್ರಭುದ್ದತೆ ಇಲ್ಲ. ಪ್ರೀತಂ ಗೌಡರನ್ನು ಸೋಲಿಸಬಹುದು ಎಂದು ರೇವಣ್ಣನ ಕುಟುಂಬ ತೀರ್ಮಾನ ಮಾಡಿರಬಹುದು. ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಜನ ಎಂದರೆ ನನ್ನ ಕುಟುಂಬ ಇದ್ದ ಹಾಗೆ. ಪ್ರೀತಂ ಗೌಡ ಶಾಸಕನಾಗಬೇಕೆಂದನ್ನು ಅವರು ತೀರ್ಮಾನ ಮಾಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ದೇವೇಗೌಡರ ಕಾಲಿನ ಧೂಳಿನ ಸಮ ಇಲ್ಲ ರಾಜಣ್ಣ: ಸಂಸದ ಪ್ರಜ್ವಲ್ ರೇವಣ್ಣ
ಪ್ರಜ್ವಲ್ ಅವರು ಸಂಸದರಾದ ಮೇಲೆ ಒಂದು ಬಾರಿಯೂ ಹಳ್ಳಿಗಳಿಗೆ ಹೋಗಲಿಲ್ಲ. ಈಗ ಅವರ ತಾಯಿಯನ್ನು ಇಲ್ಲಿ ಕಣ ಇಳಿಸಲು ಮುಂದಾಗಿರುವುದರಿಂದ ಎಲ್ಲಾ ಗ್ರಾಮಗಳನ್ನ ಒಮ್ಮೆ ನೋಡಿಕೊಂಡು ಬರಲಿ ಎಂದು ಸಲಹೆ ನೀಡಿದರು. ನೀವು ನನ್ನನ್ನು ಯಾವನೋ ಎಂದು ಕರೆದಿರುವುದು ಹಾಸನ ವಿಧಾನಸಭಾ ಕ್ಷೇತ್ರದ ಜನರನ್ನು ಕರೆದಂತೆ. ಏಕೆಂದ್ರೆ ನಾನು ಅವರ ಪ್ರತಿನಿಧಿ. ಆ ಹುದ್ದೆಗೆ ಗೌರವ ಕೊಡುವುದನ್ನು ಮೊದಲು ಕಲಿಯಲಿ. ಅವರಿಗೆ ಬಹಳಷ್ಟು ವಯಸ್ಸಿದೆ. ನಾನು ಅಪ್ಪಿ ತಪ್ಪಿ ಸಂಸದರನ್ನು ಏಕವಚನದಲ್ಲಿ ಮಾತನಾಡಿಸುವುದಿಲ್ಲ ಎಂದು ಬುದ್ಧಿಮಾತು ಹೇಳಿದರು.
ಇದನ್ನೂ ಓದಿ: ನಾನು ಯಾರನ್ನೂ ರಕ್ಷಣೆ ಮಾಡಿಲ್ಲ, ನಾನೇ ಸೂಕ್ತ ತನಿಖೆಗೆ ಆಗ್ರಹಿಸಿದ್ದೇನೆ : ಪ್ರಜ್ವಲ್ ರೇವಣ್ಣ