ಹಾಸನ: ಬಿಜೆಪಿಯಿಂದ ನನಗೆ ಆಫರ್ ಬಂದಿದ್ದು ನಿಜ. 50 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೇಲೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸಂಸದರ, ಪಕ್ಷದ ನೂತನ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ನನ್ನ ಜತೆಯಲ್ಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೂ ಬಿಜೆಪಿಯವರು ಉಪಮುಖ್ಯಮಂತ್ರಿಯ ಹುದ್ದೆ ನೀಡುವುದಾಗಿ ಭರವಸೆ ನೀಡಿ ಆಹ್ವಾನಿಸಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಅವರ ಪತ್ನಿ, ಜಿಪಂ ಸದಸ್ಯೆ ಚಂಚಲಾ ಅವರ ಮೂಲಕ ಆಮಿಷವೊಡ್ಡಿದ್ದರು. ಆದರೆ ನಾವ್ಯಾರೂ ಅದಕ್ಕೆ ಬಲಿಯಾಗಲಿಲ್ಲ ಎಂದು ತಿಳಿಸಿದರು.
ಇಷ್ಟೆಲ್ಲ ಹಣ ನೀಡುವುದಾಗಿ ನಮಗೆ ಆಮಿಷವೊಡ್ಡಿದ್ದ ಬಿಜೆಪಿಯವರನ್ನು ಯಾರೂ ಬಂಧಿಸುತ್ತಿಲ್ಲ. ಆದರೆ, ಕೇವಲ 8 ಕೋಟಿ ರೂ. ಲೆಕ್ಕಕ್ಕಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಪ್ರಚಾರ ಮಾಡಿ ನನ್ನ ಹೆಸರು ಕೆಡಿಸುವ ಪ್ರಯತ್ನ ಮಾಡಿದ್ದರು. ಆದರೆ ನಾನು ಯಾವುದೇ ಕಾರಣಕ್ಕೂ ದೇವೇಗೌಡರನ್ನು ಬಿಟ್ಟು ಹೋಗುವುದಿಲ್ಲ. ನಾವು ಉತ್ತರ ಭಾರತೀಯರ ದಬ್ಬಾಳಿಕೆಯಿಂದ ಹೊರಬರಬೇಕಿದೆ. ಇಡೀ ದೇಶ ಈಗ ಇಬ್ಬರು ಮಾರ್ವಾಡಿಗಳ ಹಿಡಿತಕ್ಕೆ ಸಿಲುಕಿಕೊಂಡಿದೆ. ರಾಜ್ಯದಿಂದ ಬಿಜೆಪಿಯ 25 ಸಂಸದರನ್ನು ಗೆಲ್ಲಿಸಿದರೂ ಕೇಂದ್ರದಿಂದ ಬಿಡಿಗಾಸು ನೆರೆ ಪರಿಹಾರ ಪಡೆಯಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.