ಸಕಲೇಶಪುರ (ಹಾಸನ) : ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯವರ ಆಪರೇಷನ್ಗೆ ಜೆಡಿಎಸ್ ಶಾಸಕರು ಮಣಿಯುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಯಸಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ 2 ಸ್ಥಾನಗಳನ್ನು ಹಾಗೂ ಕಾಂಗ್ರೆಸ್‌ನವರು 1 ಸ್ಥಾನ ಗೆಲ್ಲೋಕೆ ಅವಕಾಶವಿದ್ದು ಇನ್ನುಳಿದ 1 ಸ್ಥಾನದಲ್ಲಿ ನಾವು ಸ್ಫರ್ಧಿಸಲು ಯೋಜಿಸಿದ್ದೇವೆ. ಜೆಡಿಎಸ್ ಕೇವಲ 34 ಸ್ಥಾನಗಳನ್ನು ಹೊಂದಿದ್ದು ಹೇಗೆ ಗೆಲ್ಲುತ್ತದೆ ಎಂದು ಎಲ್ಲರೂ ಯೋಚನೆ ಮಾಡುತ್ತಿದ್ದಾರೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಸಭೆಯನ್ನು ಮಾಡಲಾಗಿದೆ. ಇಡೀ ಸಭೆ ದೇವೇಗೌಡರ ಪರ ನಿಂತಿದೆ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಎಲ್ಲರೂ ಸಿದ್ಧರಿದ್ದಾರೆ. ಬಿಜೆಪಿಯವರು ಮತ್ತು ಕಾಂಗ್ರೆಸ್ ದೇವೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಲು ಒಪ್ಪಿದಲ್ಲಿ ಅದು ಒಂದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.
ಬಿಜೆಪಿಯ ಸಚಿವರೊಬ್ಬರು ಕಾಂಗ್ರೆಸ್ನಿಂದ 14 ಶಾಸಕರು ಹಾಗೂ ಜೆಡಿಎಸ್ ನಿಂದ 10 ಶಾಸಕರು ನಮಗೆ ಮತ ನೀಡುತ್ತಾರೆಂದು ಹೇಳಿಕೆ ಕುರಿತು ಮಾತನಾಡಿ ಅವರು, ಇದು ಶುದ್ಧ ಸುಳ್ಳು. ಕಾಂಗ್ರೆಸ್ ಸೇರಿದಂತೆ ಯಾವುದೇ ಶಾಸಕರು ಬಿಜೆಪಿ ಪರ ಮತ ಹಾಕುವುದಿಲ್ಲ. ಜೆಡಿಎಸ್ ನ ಎಲ್ಲಾ 34 ಜನ ಶಾಸಕರು ಒಗ್ಗಟ್ಟಾಗಿ ಇದ್ದಾರೆ ಎಂದರು.