ಸಕಲೇಶಪುರ: ಮಳೆಹಾನಿ ಪರಿಹಾರಕ್ಕಾಗಿ ತಕ್ಷಣವೇ ಸರ್ಕಾರ 25 ಕೋಟಿ ಬಿಡುಗಡೆ ಮಾಡಬೇಕೆಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಪಟ್ಟಣದ ಮಿನಿವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಮಳೆಯಿಂದ ಸಕಲೇಶಪುರ, ಆಲೂರು ಭಾಗದಲ್ಲಿ ಸುಮಾರು 549 ಕೋಟಿ ನಷ್ಟವಾಗಿತ್ತು. ಆದರೆ, ಸರ್ಕಾರ ಕೇವಲ 20 ಕೋಟಿ ಹಣ ಬಿಡುಗಡೆ ಮಾಡಿತ್ತು. ಕಳೆದ 3 ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 25 ಕೋಟಿ ನಷ್ಟವಾಗಿದೆ. ಸುಮಾರು 250ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಹೋಗಿದ್ದು, 18 ಟ್ರಾನ್ಸ್ಫಾರ್ಮಾರ್ಗಳು ಹಾನಿಗೀಡಾಗಿದೆ. ಕೂಡಲೇ ಸರಿಪಡಿಸಲು ಚೆಸ್ಕಾಂ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.
ಸುಮಾರು 69 ಮನೆಗಳಿಗೆ ಭಾಗಶಃ ಹಾನಿಯುಂಟಾಗಿದೆ. ಕೂಡಲೇ ಇದಕ್ಕೆ ಪರಿಹಾರ ನೀಡಬೇಕು. ಕ್ಯಾಮನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸಿದ್ದಯ್ಯ ಎಂಬುವವರು ಮಳೆಗಾಳಿಯಿಂದ ಮೃತಪಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಮಾಡಿ ಪರಿಹಾರದ ಚೆಕ್ ನೀಡಲಿದ್ದಾರೆ. ಕಳೆದ ಬಾರಿ ಅನೇಕರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಸರ್ಕಾರ ಕೂಡಲೆ ಬಾಕಿ ಇದ್ದವರಿಗೆ ಪರಿಹಾರ ನೀಡಲು ಮುಂದಾಗಬೇಕು. ಈ ವರ್ಷ ಜೂನ್, ಜುಲೈನಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದು, ಆಗಸ್ಟ್ ಮೊದಲ ವಾರದಲ್ಲಿ ಶೇ. 25ರಷ್ಟು ಕಡಿಮೆಯಿತ್ತು. ಆದರೆ, ಕಳೆದ 3 ದಿನಗಳಲ್ಲಿ ಸುರಿದ ಮಳೆಗೆ ವಾಡಿಕೆ ಮಳೆಗೆ ಸರಿಸಮಾನವಾಗಿದೆ ಎಂದರು.
ಪಟ್ಟಣದಲ್ಲಿ ಹೇಮಾವತಿ ನದಿ ಹಿನ್ನೀರಿನ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೆ ತಡೆಗೋಡೆ ನಿರ್ಮಾಣ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದರು.