ಸಕಲೇಶಪುರ (ಹಾಸನ): ಮಲೆನಾಡು ಭಾಗದಲ್ಲಿ ಜನ ಹೆಚ್ಚು ಹೆಚ್ಚು ಗಿಡಗಳನ್ನು ನೆಡಲು ಮುಂದಾಗಬೇಕೆಂದು ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮನವಿ ಮಾಡಿದರು.
ಪಟ್ಟಣದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿ, ವನಮಹೋತ್ಸವ ಕಾರ್ಯಕ್ರಮ ಕೇವಲ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಸೀಮಿತವಾಗಿಲ್ಲ. ಸಂಘ ಸಂಸ್ಥೆಗಳು, ಪ್ರತಿಯೋರ್ವ ಪ್ರಜೆ ಸಹ ಪರಿಸರ ಉಳಿಸಲು ಮುಂದಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಶೇ.21ರಷ್ಟು ಅರಣ್ಯ ಪ್ರದೇಶ ಉಳಿದಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಿ ಆ ಸ್ಥಾನವನ್ನು ಪಡೆಯಬೇಕು ಎಂದರು. ಮನೆ ನಿರ್ಮಿಸುವ ಜೊತೆಗೆ ಪ್ರತಿಯೋರ್ವರು ಎರಡು ಗಿಡಗಳನ್ನು ನೆಡುವ ಮೂಲಕ ಮನೆಗೆರಡು ಮರ ಊರಿಗೊಂದು ವನದ ಸಂಕಲ್ಪ ಮಾಡಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಮನೆಗೊಂದು ಮರ ಊರಿಗೊಂದು ವನ ಎಂಬ ಯೋಜನೆಯನ್ನು ನಮ್ಮ ಸಂಸ್ಥೆ ಅಳವಡಿಸಿಕೊಂಡಿದ್ದು ಪ್ರತಿ ವಿದ್ಯಾರ್ಥಿಗಳಿಗೂ ಉಚಿತವಾಗಿ ಗಿಡ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲಾ ಕುಮಾರಸ್ಚಾಮಿ, ಬಿ.ಇ.ಒ ಶಿವಾನಂದ್, ಗ್ರಂಥಪಾಲಕ ಚಂದ್ರಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ತಾಲೂಕು ಕಾರ್ಯದರ್ಶಿ ಕೀರ್ತಿ ಕುಮಾರ್ ಇನ್ನಿತರರು ಇದ್ದರು.