ಅರಕಲಗೂಡು(ಹಾಸನ): ಜೂನ್ ಎರಡನೇ ವಾರಕ್ಕೆ ಕೊರೊನಾದ ಎರಡನೇ ಅಲೆ ಮುಕ್ತವಾಗಬಹುದು ಎಂಬುದರ ಜೊತೆ ತಜ್ಞರು ಹೇಳಿದಂತೆ ಮತ್ತೆ ಮೂರು ತಿಂಗಳ ಬಳಿಕ ರಣಭೀಕರ ಮೂರನೇ ಅಲೆ ಎದುರಾಗುತ್ತದೆ ಎಂದು ಶಾಸಕ ಎ ಟಿ ರಾಮಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತದೆ ಎಂದು ಮುನ್ಸೂಚನೆ ನೀಡುವ ಜೊತೆಗೆ ಜೂನ್ 15ರೊಳಗೆ ಎರಡನೇ ಅಲೆ ಮುಗಿಯಬಹುದು ಎಂದಿದ್ದಾರೆ.
ನಮ್ಮ ತಾಲೂಕಿನಲ್ಲಿ ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಶಕ್ತಿಮೀರಿ ತಾಲೂಕು ಆಡಳಿತ ಪ್ರಯತ್ನ ಮಾಡುತ್ತಿದೆ. ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೊರೊನಾ ನಿರ್ಮೂಲನಾ ಕಾರ್ಯಪಡೆ ನಿರ್ಮಾಣ ಮಾಡಲಾಗಿದೆ. ಪ್ರತಿ ಎರಡು ಗ್ರಾಮ ಪಂಚಾಯತಿಗೆ ಓರ್ವ ನೋಡಲ್ ಅಧಿಕಾರಿಯ ನೇಮಿಸಿ, ಕೊರೊನಾ ತಡೆಗಟ್ಟುವ ಅರಿವು ಮೂಡಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮತ್ತು ಗ್ರಾಮಗಳಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಕೊರನಾ ವಾರಿಯರ್ಸ್ಗೆ, ಮೆಡಿಕಲ್ ಕಿಟ್ ನೀಡುವ ಜೊತೆಗೆ ಪ್ರಾಶಸ್ತ್ಯದ ಮೂಲಕ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ತಾಲೂಕಿನಲ್ಲಿ 100 ಹಾಸಿಗೆಯ ಆಸ್ಪತ್ರೆ ಇದ್ದು ಅದರಲ್ಲಿ 60 ಹಾಸಿಗೆಯನ್ನ ಸೋಂಕಿತರಿಗೆ ಮೀಸಲಿಡಲಾಗಿದೆ. ಆದರೆ, ಹಾಸಿಗೆಯ ಬೇಡಿಕೆ ಹೆಚ್ಚಾದ ಹಿನ್ನೆಲೆ 20 ಬೆಡ್ ಗಳನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಇದರ ಜೊತೆಗೆ ಕೊಣನೂರು ಸಮುದಾಯ ಆಸ್ಪತ್ರೆಯನ್ನು ಕೋವಿಡ್ -19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿದೆ. ಇಪ್ಪತ್ತಕ್ಕಿಂತ ಅಧಿಕ ಸೋಂಕು ಹೊಂದಿರುವ ಗ್ರಾಮಗಳಿಗೆ ನಾನೇ ಖುದ್ದು ಭೇಟಿ ನೀಡುತ್ತಿದ್ದು, ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದರು.
ಜಿಲ್ಲೆಯಲ್ಲಿ ದಿನ ಬಿಟ್ಟು ದಿನ ಕಡಿಮೆ 6-10 ಗಂಟೆಯ ತನಕ ವ್ಯಾಪಾರಕ್ಕೆ ಅವಕಾಶ ನೀಡಿರುವುದು ಸೂಕ್ತ ಎನಿಸುತ್ತಿಲ್ಲ. ಇದರಿಂದ ಜನಜಂಗುಳಿ ಹೆಚ್ಚಾಗುತ್ತಿದ್ದು, ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಾರದಲ್ಲಿ ಎರಡು ದಿನ ಮಾತ್ರ ಬೆಳಗ್ಗೆಯಿಂದ ಸಂಜೆ ತನಕ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಈ ಕಾರ್ಯಕ್ಕೆ ಮುಂದಾಗಬೇಕು. ಕಡಿಮೆ ಸಮಯದ ಅಂತರದಲ್ಲಿ ವ್ಯಾಪಾರ ಮಾಡಲು ಜೇನುಗೂಡಿನಂತೆ ಜನ ಬರುತ್ತಿದ್ದಾರೆ. ಇದು ಮತ್ತಷ್ಟು ರೋಗ ಹರಡಲು ಕಾರಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.