ಹಾಸನ: ಹಾಡಹಗಲೇ ಯುವಕರಿಬ್ಬರು ಗನ್ ತೋರಿಸಿ ದರೋಡೆ ಯತ್ನ ಮಾಡಿರುವ ಘಟನೆ ನಿನ್ನೆ ನಗರದ ಕೆ.ಆರ್ ಪುರಂನಲ್ಲಿ ನಡೆದಿದೆ. ಖದೀಮರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆ.ಆರ್ ಪುರಂನ ಡಿ.ಟಿ ಪ್ರಕಾಶ್ ಎಂಬುವರ ಮನೆಗೆ ಯುವಕರಿಬ್ಬರು ಡಿಲಿವರಿ ಬಾಯ್ ಎಂದು ಹೇಳಿಕೊಂಡು ಬಂದು ಗನ್ ತೋರಿಸಿ ದರೋಡೆ ಯತ್ನ ಮಾಡಿದ್ದಾರೆ. ಪಾರ್ಸೆಲ್ ಕೊಡುವ ನೆಪದಲ್ಲಿ ಬಂದು ಬೆಲ್ ಮಾಡಿದ್ದಾರೆ. ಒಳಗಿದ್ದ ವಯೋವೃದ್ಧೆ ರಂಗಮ್ಮ ಬಾಗಿಲು ತೆಗೆದಿದ್ದಾರೆ. ನಿಮ್ಮ ಮಗನಿಗೆ ಏನೋ ಪಾರ್ಸೆಲ್ ಬಂದಿದೆ ಎಂದು ರಟ್ಟಿನ ಡಬ್ಬ ತೋರಿಸಿದ್ದಾರೆ. ರಂಗಮ್ಮ ಇದು ನಿಜ ಎಂದು ನಂಬಿದ್ದಾರೆ.
ಅಷ್ಟರಲ್ಲಿ ರಂಗಮ್ಮ ಅವರ ಹಣೆಗೆ ಗನ್ ತೋರಿದ ಕಿರಾತಕರು ಅವರ ಕುತ್ತಿಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ರಂಗಮ್ಮ ಜೋರಾಗಿ ಕಿರುಚಾಡಿದ್ದಾರೆ. ಗಾಬರಿಗೊಂಡ ದುಷ್ಕರ್ಮಿಗಳು ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದಾರೆ. ಓರ್ವ ಚಪ್ಪಲಿ ಬಿಟ್ಟು ಪರಾರಿಯಾಗಿದ್ದಾನೆ.
ಮನೆ ಯಜಮಾನ ಪ್ರಕಾಶ್ ಮತ್ತು ಅವರ ಪತ್ನಿ ಆಶಾ ಅವರು ಮನೆಯಲ್ಲಿ ಇಲ್ಲದ ವೇಳೆ ಹೊಂಚುಹಾಕಿ ತಿಳಿದವರೆ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ಮೂಡಿದೆ. ಖದೀಮರು ರಟ್ಟಿನ ಡಬ್ಬದಲ್ಲಿ ಪಾರ್ಸೆಲ್ ರೂಪದಲ್ಲಿ ಇಟ್ಟಿಗೆ ತುಂಡು ತಂದಿದ್ದರಂತೆ. ದರೋಡೆ ಯತ್ನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೊಲೀಸರು ಸಿಸಿ ಕ್ಯಾಮರಾ ದೃಶ್ಯದ ಆಧಾರದ ಮೇಲೆ ಖದೀಮರಿಗೆ ಬಲೆ ಬೀಸಿದ್ದಾರೆ. ಕಳೆದ ಮೂರು ದಿನದಲ್ಲಿ ಹೊಳೆನರಸೀಪುರದಲ್ಲಿ 11 ಅಂಗಡಿ, ಮನೆ ಕಳ್ಳತನ ಮಾಡಿದ ಪ್ರಕರಣ ನಡೆದ ಬೆನ್ನಲ್ಲೇ ಇದೀಗ ಈ ಘಟನೆ ನಡೆದಿರುವುದು ನಗರದ ಜನತೆಯ ನಿದ್ದೆ ಗೆಡಿಸಿದೆ.
ಇದನ್ನೂ ಓದಿ: ಎಂಟು ತಿಂಗಳ ತುಂಬು ಗರ್ಭಿಣಿ ಪತ್ನಿಗೆ ಹೊಡೆದು ಕೊಂದ ಪೊಲೀಸ್: ಹೊಟ್ಟೆಯಲ್ಲೇ ಶಿಶು ಕೂಡ ಸಾವು