ಹಾಸನ: ಸಿಎಂ ಬದಲಾವಣೆ ಮಾಧ್ಯಮಗಳ ಊಹಾಪೋಹ ಅಷ್ಟೇ.. ಯಡಿಯೂರಪ್ಪ ಅವರೇ ನಮ್ಮ ಪಕ್ಷದ ನಾಯಕ ಎಂದು ವಸತಿ ಸಚಿವ ವಿ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬೃಹತ್ ಕೈಗಾರಿಕಾ ಸಚಿವರು ಹಾಗೂ ಪ್ರಭಾವಿ ನಾಯಕರು. ದೆಹಲಿಯಲ್ಲಿರುವ ಹಿರಿಯ ನಾಯಕರ ಜೊತೆ ಕೈಗಾರಿಕಾ ಅಭಿವೃದ್ದಿ ಬಗ್ಗೆ ಚರ್ಚೆಸಲು ಹೋಗಿದ್ದಾರೆ. ಶೆಟ್ಟರ್ ಯಾಕೆ ದೆಹಲಿಗೆ ಹೋಗಿದ್ದರು ಅಂತಾ ಕೇಳಿದ್ರೆ ನನ್ನಂತ ದಡ್ಡ ಯಾರಿಲ್ಲ. ಯಡಿಯೂರಪ್ಪ ಈ ರಾಜ್ಯದ ಮತ್ತು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ ಎಂದರು.
ಚಿಕ್ಕಮಗಳೂರಿನಲ್ಲಿ ಸಿಎಂ ಬದಲಾವಣೆ ಬಗ್ಗೆ ಸಚಿವ ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ಸಿ ಟಿ ರವಿ ಅವರನ್ನು ಭೇಟಿ ಮಾಡಿ ಸಭೆ ನಡೆಸಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಲ್ಲಿ ಯಾರೂ ಸಭೆ ನಡೆಸಿಲ್ಲ. ಸಚಿವ ಸಿ ಟಿ ರವಿ ಅವರಿಗೆ ಕೊರೊನಾ ದೃಢಪಟ್ಟಿತ್ತು. ಸಚಿವ ಅಶೋಕ್ ಎಲ್ಲೋ ಇದ್ದಾರೆ. ಜಗದೀಶ್ ಶೆಟ್ಟರ್ ಅಲ್ಲಿ ಇರಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.