ಬೇಲೂರು : ಜಾತಿ ಮೇಲೆ ನಂಬಿಕೆ ನಮಗಿಲ್ಲ. ಆದರೆ, ನರೇಂದ್ರ ಮೋದಿ ಮೇಲೆ ನಮಗೆ ನಂಬಿಕೆ ಇದೆ. ಅವರ ಉತ್ತಮ ಕಾರ್ಯಗಳು ಪ್ರತಿಯೊಬ್ಬರಿಗೂ ತಲುಪುತ್ತಿರುವುದರಿಂದ ನಮ್ಮ ಪಕ್ಷ ಬಲಗೊಳ್ಳುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಹಾಸನ ಜಿಲ್ಲೆಯ ಬೇಲೂರಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸುಮಾರು 60 ವರ್ಷಗಳ ಬಳಿಕ ನಾವು ಶಿರಾ ಕ್ಷೇತ್ರವನ್ನು ಹಾಗೂ 58 ಸಾವಿರ ಮತಗಳ ಅಂತರದಿಂದ ಆರ್‌ಆರ್‌ನಗರ ಕ್ಷೇತ್ರವನ್ನು ಗೆದ್ದು ಬಿಜೆಪಿ ಬಾವುಟ ಹಾರಿಸಿದ್ದೇವೆ.
ಹಾಸನದಲ್ಲಿಯೂ ಪಕ್ಷ ಗೆಲ್ಲಲು ಸಾಧ್ಯ ಎಂಬುದನ್ನು ಯುವ ನಾಯಕ ಪ್ರೀತಂ ಗೌಡ ತೋರಿಸಿದ್ದಾರೆ. ಬಿಹಾರದಲ್ಲಿ ಈಗಾಗಲೇ ನಾವು ಗೆದ್ದಿದ್ದು, ಪಶ್ಚಿಮ ಬಂಗಾಳದಲ್ಲಿ ಕೂಡ ಗೆಲುವು ಸಾಧಿಸುವ ನಿಟ್ಟಿನಲ್ಲಿ ಬಲಗೊಳ್ಳುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ತಿರಸ್ಕಾರವಾಗಿದೆ. ಜೆಡಿಎಸ್ ಪಕ್ಷ ಮೂಲೆ ಗುಂಪಾಗಿದೆ. ಪಕ್ಷದ ಬಲವರ್ಧನೆಗಾಗಿ ಹೊಸ ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.
ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನು ಈಗ ಹಾಸನದಲ್ಲಿ ಪ್ರಾರಂಭ ಮಾಡಿದ್ದು, ಆರು ತಂಡಗಳನ್ನು ನಮ್ಮ ಪಕ್ಷ ರಚನೆ ಮಾಡಿದೆ. ಇನ್ನು ನಾಲ್ಕು ದಿನಗಳಲ್ಲಿ ಐದು ಜಿಲ್ಲೆಗಳಲ್ಲಿ ನಮ್ಮ ತಂಡ ಗ್ರಾಮ ಸ್ವರಾಜ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಲಿದೆ. ಜೊತೆಗೆ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬಾವುಟವನ್ನು ಮುಗಿಲೆತ್ತರಕ್ಕೆ ಹಾರಿಸುವ ಗುರಿಯನ್ನು ಕೂಡ ಹೊಂದಿದ್ದೇವೆ ಎಂದರು.
ಇದನ್ನೂ ಓದಿ: ಆಧಾರ್ ಕಾರ್ಡ್ ಇದ್ದರೆ ವೃದ್ಧಾಪ್ಯ ವೇತನ ನೀಡುತ್ತೇವೆ : ಕಂದಾಯ ಸಚಿವ ಆರ್.ಅಶೋಕ್