ಹಾಸನ: ಮಲೆನಾಡು ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಹಾಸನ ಜಿಲ್ಲೆಯ ಹಲವು ತಾಲೂಕುಗಳು ಪ್ರವಾಹ ಪೀಡಿತವಾಗಿದ್ದು, ಇಂದು ಸಚಿವರಾದ ಸಿ.ಟಿ. ರವಿ ಮತ್ತು ಜೆ.ಸಿ. ಮಾಧುಸ್ವಾಮಿ ಮಲೆನಾಡು ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು.
ಇನ್ನು ಹಾನುಬಾಳು ಮತ್ತು ಹುಷಾರು ಎಸ್ಟೇಟ್ಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿ ಖುದ್ದು ಗುಡ್ಡ ಕುಸಿತ ಉಂಟಾದ ಪ್ರದೇಶಕ್ಕೆ ಮಳೆಯ ನಡುವೆಯೂ ಸ್ವತಃ ತಾವೇ ಕೊಡೆಯನ್ನ ಹಿಡಿದುಕೊಂಡು ಕಾಲ್ನಡಿಗೆಯಲ್ಲಿಯೇ ತೆರಳಿ, ವೀಕ್ಷಣೆ ಮಾಡಿದ್ರು. ಹಾನುಬಾಳು ಪ್ರದೇಶದ ಜನರೊಂದಿಗೆ ಸಮಾಲೋಚನೆ ನಡೆಸಿ ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಮತ್ತು ಸಂಕಷ್ಟದ ಬಗ್ಗೆ ಚರ್ಚೆ ನಡೆಸಿದ್ರು. ಇದೇ ವೇಳೆ ಹತ್ತಾರು ಗ್ರಾಮಗಳ ಸಂತ್ರಸ್ತ ಕುಟುಂಬಸ್ಥರು ಸಚಿವರೆದುರು ತಮ್ಮ ನೋವನ್ನು ತೋಡಿಕೊಂಡರು.
ಬಳಿಕ ಮಾತನಾಡಿದ ಮಾಧುಸ್ವಾಮಿ, ಚಿಕ್ಕಮಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಸಂಭವಿಸಿರುವಂತೆಯೇ ಇಲ್ಲಿಯೂ ಕೂಡಾ ಹಾನಿಯಾಗಿದೆ. ಹಾಸನದಲ್ಲಿ ಸುಮಾರು 350ಕ್ಕೂ ಅಧಿಕ ಕೋಟಿ ಮೊತ್ತದ ಹಾನಿಯಾಗಿರಬಹುದೆಂಬ ಅಂದಾಜಿದೆ. ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಮನೆಯನ್ನ ಕಳೆದುಕೊಂಡ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿಕೊಡುವ ಕಾರ್ಯಕ್ಕೆ 50 ಸಾವಿರ ಮತ್ತು ಶೆಡ್ನಲ್ಲಿ ಇರಲಾಗದವರಿಗೆ 5 ಸಾವಿರ ವೆಚ್ಚದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರಲು ಅನುಕೂಲ ಮಾಡಿಕೊಳ್ಳುವಂತೆ ಅದನ್ನ ಸರ್ಕಾರವೇ 6 ತಿಂಗಳು ಭರಿಸಲು ಸಿದ್ಧವಿದೆ. ಅಲ್ಲದೇ ಪ್ರತಿ ಸಂತ್ರಸ್ತ ಕುಟುಂಬಕ್ಕೆ ತಾತ್ಕಾಲಿಕವಾಗಿ 10 ಸಾವಿರ ರೂ.ನಂತೆ ಈಗಾಗಲೇ ಬ್ಯಾಂಕ್ ಖಾತೆಗೆ ಹಾಕುವ ಕಾರ್ಯವೂ ನಡೆಯುತ್ತಿದೆ ಎಂದ್ರು.
ನಾವು ಊಹಿಸದೇ ಇರುವಷ್ಟು ಮಳೆ ಮತ್ತು ಪ್ರವಾಹ ಉಂಟಾಗಿದ್ದು, ನೀರಿನ ರಭಸಕ್ಕೆ ಮನೆಗಳೇ ಬಿದ್ದುಹೋಗಿವೆ. ಮರಗಳು ಧರಗುರುಳಿ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ಪೂರೈಸಲು ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. 5 ಎಕರೆಗಿಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಿಗೆ ಎನ್ಡಿಆರ್ಎಫ್ ನಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ. ಇನ್ನು ಕೇಂದ್ರ ಯಾವುದೇ ಕಾರಣಕ್ಕೂ ಹಾನಿಗೊಳಗಾದ ಪ್ರದೇಶಗಳಿಗೆ ಮೊದಲೇ ಹಣ ಬಿಡುಗಡೆ ಮಾಡುವುದಿಲ್ಲ. ನಷ್ಟದ ಸಮಗ್ರ ವರದಿ ನೀಡಿದ ಬಳಿಕವಷ್ಟೇ ಅದನ್ನ ಪರಿಶೀಲಿಸಿ, ಬಳಿಕ ಬಿಡುಗಡೆ ಮಾಡಲಾಗುತ್ತದೆ ಅಂತಾ ತಿಳಿಸಿದ್ರು.