ಅರಕಲಗೂಡು (ಹಾಸನ): ಜನರು ಕಾವೇರಿ ಜಲಪ್ರಳಯಕ್ಕೆ ಸಿಲುಕುವುದನ್ನು ತಪ್ಪಿಸುವ ಉದ್ದೇಶದಿಂದ ರಾಮನಾಥಪುರದಲ್ಲಿ ನದಿ ದಂಡೆಗೆ ರಕ್ಷಣಾ ತಡೆಗೋಡೆ ಸ್ಥಾಪಿಸುವ ಕಾರ್ಯ ಆದಷ್ಟು ಬೇಗ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭರವಸೆ ನೀಡಿದರು.
ಈ ವೇಳೆ, ಕಳೆದ ಮೂರು ವರ್ಷಗಳಿಂದ ತಡೆಗೋಡೆ ಕಟ್ಟುವುದಾಗಿ ಕೇವಲ ಆಶ್ವಾಸನೆ ನೀಡಲಾಗುತ್ತಿದೆಯೇ ಹೊರತು ತಡೆಗೋಡೆ ಕನಸು ಇಂದಿಗೂ ನನಸಾಗಿಲ್ಲ ಎಂದು ಸ್ಥಳೀಯರು ಸಚಿವರಲ್ಲಿ ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಸಚಿವರು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನೆರೆ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಹಾಗೆಯೇ ನೆರೆಪೀಡಿತರಿಗೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ಈ ಸಂದರ್ಭ ಮಾಜಿ ಸಚಿವ ಎ. ಮಂಜು ಮಾತನಾಡಿ, ಹೊಳೆನರಸೀಪುರದಲ್ಲಿ ಹೇಮಾವತಿ ನದಿ ದಂಡೆಗೆ ಕಟ್ಟಿದಂತೆ ರಾಮನಾಥಪುರದಲ್ಲೂ ಕಾವೇರಿ ನದಿಗೆ ತಡೆಗೋಡೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದು, ನದಿ ದಂಡೆಗೆ ತಡೆಗೋಡೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎ. ಟಿ. ರಾಮಸ್ವಾಮಿ ಮನವಿ ಮಾಡಿದರು.
ತಾಲೂಕಿನಲ್ಲಿ ಮಳೆ, ಗಾಳಿಗೆ ಸದ್ಯ ಒಂದೂವರೆ ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಮುಸುಕಿನ ಜೋಳ ಹಾಳಾಗಿದೆ. ಪ್ರವಾಹ ತಗ್ಗಿದ ನಂತರ ಎಲ್ಲಾ ಇಲಾಖೆಗಳಿಂದ ಹಾನಿಯ ನಿಖರ ವರದಿ ಪಡೆದು ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ನೆರೆ ಸಂಕಷ್ಟಕ್ಕೆ ಸರ್ಕಾರ ಎಲ್ಲ ರೀತಿಯಲ್ಲೂ ಸ್ಪಂದಿಸಲಿದೆ ಎಂದರು.
ಇನ್ನು, ತಾಲೂಕಿನಲ್ಲಿ ಕಳೆದ ಮೂರು ದಶಕಗಳಿಂದ ರಾಜಕೀಯ ಬದ್ಧ ವೈರಿಗಳೆಂದೇ ಬಿಂಬಿತವಾಗಿರುವ ಮಾಜಿ ಸಚಿವ ಎ. ಮಂಜು, ಶಾಸಕ ಎ. ಟಿ. ರಾಮಸ್ವಾಮಿ ಅವರು ಸಚಿವರೊಂದಿಗೆ ಒಂದೇ ಕಾರಿನಲ್ಲಿ ಪ್ರಯಾಣಿಸಿ ಅಚ್ಚರಿ ಮೂಡಿಸಿದರು.