ಬೇಲೂರು (ಹಾಸನ): ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಖಂಡಿತ ನಮ್ಮ ಸರ್ಕಾರದಿಂದ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಯೋಜನೆ ನೀಡುತ್ತೇವೆ, ಅರಣ್ಯ ಸಚಿವರು ಕೂಡ ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಜನಸ್ಪಂದನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಈಗಾಗಲೇ ನಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ಕಾಡಾನೆ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ರಾಜ್ಯ ಲೆಕ್ಕಪತ್ರ ಮಂಡನೆಯಾಗುವ ಸಂದರ್ಭದಲ್ಲಿ ಎಲ್ಲ ಶಾಸಕರು ಮತ್ತು ಸಚಿವರ ಅಭಿಪ್ರಾಯ ಪಡೆದು ಆನೆ ಕಾರಿಡಾರ್ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಮಾಜಿ ಸಚಿವ ಎ. ಮಂಜು ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾ ಪಂಚಾಯಿತಿಯ ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಆಗಿರುವ ಲೋಪದೋಷಗಳನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಸರಿಪಡಿಸಲಾಗುವುದು. ಇದರ ಬಗ್ಗೆ ನಮ್ಮ ಪಕ್ಷದ ಎ. ಮಂಜು ಜೊತೆಗೂ ಚರ್ಚೆ ನಡೆಸಿ ಲೋಪದೋಷಗಳನ್ನು ಸರಿಪಡಿಸುತ್ತೇನೆ ಎಂದರು.
ಕೋವಿಡ್-19 ಸಂದರ್ಭದಲ್ಲಿ ಕೆಲವು ರಾಜಕಾರಣಿಗಳು ದುಬಾರಿ ವಾಹನಗಳನ್ನು ಖರೀದಿಸುವ ಮೂಲಕ ಸರ್ಕಾರದ ಹಣ ದುಂದು ವೆಚ್ಚ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಸಚಿವರು ಬೆಂಗಳೂರು ಮೂಲಕ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಬೇಕಾಗಿರುತ್ತದೆ. ಸಾಕಷ್ಟು ವಾಹನಗಳು ರಿಪೇರಿಗೆ ಬರುವುದು ಸಹಜ ಮತ್ತು ವಾಹನಗಳನ್ನು ಹಲವಾರು ವರ್ಷ ಬಳಕೆ ಮಾಡಿದ್ದರಿಂದ ಹಳೆಯದಾಗಿರುತ್ತವೆ. ಹೀಗಾಗಿ ಜನಸಾಮಾನ್ಯರ ನಡುವೆ ಕೆಲಸ ಮಾಡುವ ಸಂದರ್ಭದಲ್ಲಿ ತುರ್ತಾಗಿ ಬೇರೆ ಕಡೆಗೆ ಹೋಗಬೇಕಾದರೆ ಉತ್ತಮ ವಾಹನಗಳ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ವಾಹನ ಖರೀದಿಸಿರಬಹುದು. ಹಾಗಾಗಿ ಅದನ್ನು ತಪ್ಪು ಎಂದು ಭಾವಿಸಲಾಗುವುದಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಈಗಾಗಲೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಿಂದಲೂ ಸರ್ಕಾರದ ಅಧಿಕಾರಿಗಳು ಜನರಿಗೆ ಸ್ಪಂದನೆ ನೀಡುತ್ತಿದ್ದಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾನು ಕೂಡ ಜಿಲ್ಲೆಯಲ್ಲಿ ಪ್ರತಿ ತಿಂಗಳು ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಜನರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಮತ್ತು ನಮ್ಮ ಸರ್ಕಾರದ ಮೊದಲ ಆದ್ಯತೆ ಕೂಡ ಆಗಿದೆ ಎಂದರು.