ಹಾಸನ : ಡ್ರಗ್ಸ್ ದಂಧೆ ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಖಡಕ್ ಆಗಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪಶು ಸಂಗೋಪನಾ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿದ್ದ ಪಶು ಸಂಜೀವಿನಿ ವಾಹನದ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಗಿಣಿ ಸೇರಿದಂತೆ ಡ್ರಗ್ಸ್ ದಂಧೆ ಕೇಸ್‌ನಲ್ಲಿ ಸಿಲುಕಿರುವ ಪ್ರಭಾವಿಗಳನ್ನು ರಕ್ಷಿಸಲು ಕೆಲವು ಸಚಿವರು ಮುಂದಾಗಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದರು. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಈಗಾಗಲೇ ಆದೇಶಿಸಿದೆ.
ಮುಖ್ಯಮಂತ್ರಿ, ಗೃಹ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ನಮ್ಮ ಸರ್ಕಾರ ಯಡಿಯೂರಪ್ಪ ನೇತೃತ್ವದ ಸರ್ಕಾರ. ತಪ್ಪಿತಸ್ಥರು ಯಾರೇ ಇದ್ದರೂ ಅವರ ಮೇಲೆ ಕ್ರಮ ನಿಶ್ಚಿತ ಎಂದರು.
ರೈತರು ಸಾಕಿದ ಜಾನುವಾರುಗಳು ಕಾಯಿಲೆಗಳಿಗೆ ತುತ್ತಾದಾಗ ಕೇವಲ ಒಂದು ಕರೆ ಮಾಡಿದ್ರೆ ಸಾಕು, ಪಶು ಸಂಜೀವಿನಿ ವಾಹನವು ರೈತರ ಮನೆಯ ಬಾಗಿಲಿಗೆ ಬಂದು ಜಾನುವಾರುಗಳ ಚಿಕಿತ್ಸೆ ಮಾಡುವ ಸೌಲಭ್ಯವನ್ನು ಈ ಮೂಲಕ ಒದಗಿಸಲಾಗುತ್ತಿದೆ ಎಂದರು. 200 ಕೆಜಿಗೆ ಒಳಪಟ್ಟ ಜಾನುವಾರುಗಳಿಗೆ ಈ ವಾಹನದಲ್ಲಿಯೇ ಶಸ್ತ್ರ ಚಿಕಿತ್ಸೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರು ಸಾಕುವ ಜಾನುವಾರುಗಳ ಚಿಕಿತ್ಸೆಗೆ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಮೂಲಕ ಉತ್ತಮ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಹಾಸನಕ್ಕೆ ಬರುವ ಮಾರ್ಗ ಮಧ್ಯೆ ಚನ್ನರಾಯಪಟ್ಟಣ ತಾಲೂಕಿನ ಸೋಮಾರ ಸಂತೆಯ ಗೇಟ್ ಹತ್ತಿರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದಾಗಿ ಕಾರಿನೊಳಗಿದ್ದ ಜನ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಕಾರ್ ಬಳಿ ಧಾವಿಸಿ ಕಾರ್‌ನಲ್ಲಿದ್ದವರನ್ನು ರಕ್ಷಿಸಲು ಸಹಾಯ ಮಾಡಿದ್ದೇನೆ.
ನಂತರ ಅವರನ್ನು ಕಾರಿನಲ್ಲಿ ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದೆ. ಕಾರ್‌ನಲ್ಲಿದ್ದವರು ಬೆಂಗಳೂರಿನಿಂದ ತೀರ್ಥಹಳ್ಳಿಗೆ ಕಡೆಗೆ ಹೋಗುತಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಿದ ನಂತರ, ತೀರ್ಥಹಳ್ಳಿಗೆ ಹೋಗುವುದಕ್ಕೆ ಬದಲಿ ವಾಹನ ವ್ಯವಸ್ಥೆಯನ್ನು ಮಾಡಿ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ಯಾವ ಪ್ರಕರಣಗಳಿಗೂ ರಾಜಕೀಯ ಬೆರೆಸುವುದು ಬೇಡ. ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಧೈರ್ಯ ಮೆಚ್ಚುಬೇಕು. ಇನ್ನೂ ಹೆಚ್ಚಿನ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.