ಹಾಸನ: ಯಡಿಯೂರಪ್ಪವನರು ನನ್ನ ಮೇಲೆ ವಿಶ್ವಾಸ ಇಟ್ಟು ಸಚಿವ ಸ್ಥಾನ ಕೊಟ್ಟಿದ್ದಾರೆ. ಜೊತೆಗೆ ಹಾಸನ ಉಸ್ತುವಾರಿ ಸಚಿವನಾಗಿಯೂ ನೇಮಿಸಿದ್ದಾರೆ. ಹೀಗಾಗಿ ಅವರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಆಹಾರ ಖಾತೆ ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಬಳಿ ಗಡಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆ ಈಗಾಗಲೇ ಸಾಕಷ್ಟು ಅಭಿವೃದ್ಧಿ ಆಗಿದೆ. ಹೀಗಾಗಿ ಇನ್ನುಳಿದ ಕೆಲಸಗಳನ್ನ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಮಾಡುತ್ತೇನೆ ಎಂದರು.
ಈ ಜಿಲ್ಲೆ ಅಭಿವೃದ್ಧಿ ಆಗಬೇಕೆಂಬ ಆಶಯ ಇಟ್ಟುಕೊಂಡು ಸಿಎಂ ಅವಕಾಶ ಕೊಟ್ಟಿದ್ದಾರೆ. ಅದರಂತೆ ನಾನು ಕೆಲಸ ಮಾಡುತ್ತೇನೆ. ನಾನು ಯಾವುದೇ ಖಾತೆ ಕೇಳಿರಲಿಲ್ಲ. ಉಸ್ತುವಾರಿಯನ್ನೂ ಕೇಳಿರಲಿಲ್ಲ. ಅಲ್ಲದೆ ನಾನು ರೈತ ಕುಟುಂಬದಿಂದ ಬಂದವನು. ಹೀಗಾಗಿ ನನ್ನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ದುಡಿದಂತೆ ಇಲ್ಲೂ ಕೂಡ ಕೆಲಸ ಮಾಡುತ್ತೇನೆ. ಹಾಗೇ ನಾನು ವಾರದಲ್ಲಿ ಎರಡು ದಿನ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದರು.
ನಾನು ರಾಜಕೀಯ ಮಾಡಲು ಜಿಲ್ಲೆಗೆ ಬಂದಿಲ್ಲ. ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರ ಸಲಹೆ ಪಡೆದು ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.