ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ರಾಯಸಮುದ್ರ ಅಮೃತಮಹಲ್ ಕೇಂದ್ರವನ್ನು ಪರಿಶೀಲಿಸಿದ ಬಳಿಕ ಬಿದರೆ ಕಾವಲಿಗೆ ತೆರಳುವ ಮಾರ್ಗಮಧ್ಯೆ ಪಶುಸಂಗೋಪನಾ ಇಲಾಖೆ ಆಯುಕ್ತರ ಕಾರಿಗೆ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ನವಿಲೆ ಅಣ್ಣಪ್ಪ ಎಂಬುವವರ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮುಂಭಾಗದಲ್ಲಿದ್ದ ಸಚಿವ ಪ್ರಭು ಚೌಹಾಣ್ ಕಾರು ಸ್ವಲ್ಪದರಲ್ಲಿಯೇ ಮಿಸ್ ಆಗಿದ್ದು, ಆಗಬಹುದಾದ ದುರಂತ ತಪ್ಪಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಸಮೀಪದ ಹುಲ್ಲಿನ ಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪನ ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸಚಿವ ಪ್ರಭು ಚೌಹಾಣ್ ಮತ್ತು ಬಿಜೆಪಿ ಅಧ್ಯಕ್ಷ ನವಿಲೆ ಅಣ್ಣಪ್ಪ ಒಂದೇ ಕಾರಲ್ಲಿ ತೆರಳುತ್ತಿದ್ದರು. ಈ ವೇಳೆ ಸಚಿವರ ಕಾರನ್ನು ಚಾಲಕ ಅತಿ ವೇಗವಾಗಿ ಹಿಂಬಾಲಿಸಿಕೊಂಡು ಬರುವಾಗ ಹುಲ್ಲೇನಹಳ್ಳಿ ತಿರುವಿನಲ್ಲಿ ಆಯುಕ್ತರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಲಾಖೆಯ ಆಯುಕ್ತರ ಕಾರು ಸ್ವಲ್ಪ ಡೆಂಟ್ ಆಗಿದೆ.
ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ತಕ್ಷಣ ಕಾರಿನಿಂದಿಳಿದು ಬಿಜೆಪಿ ಅಧ್ಯಕ್ಷರ ಕಾರಿನ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಸಚಿವರು ಇರುವಂತಹ ಸಂದರ್ಭದಲ್ಲಿ ಪ್ರೋಟೋಕಾಲ್ ಇರುತ್ತದೆ. ಗಂಟೆಗೆ ಸರಾಸರಿ 20 ಕಿಲೋಮೀಟರ್ ವೇಗದಲ್ಲಿ ವಾಹನ ಚಲಾಯಿಸಬೇಕು. ಅದನ್ನು ಬಿಟ್ಟು ಹೀಗೆ ಹೋದರೆ ಹೇಗೆ ಅಂತ ಎಚ್ಚರಿಕೆ ನೀಡಿದರು.
ಇನ್ನು ರಾಯಸಂದ್ರ ಅಮೃತ ಮಹಲ್ ಕೇಂದ್ರದಿಂದ ಅರಸೀಕೆರೆ ತಾಲ್ಲೂಕಿನ ಬಿದರೆ ಕಾವಲಿಗೆ ತೆರಳುವ ಸಂದರ್ಭದಲ್ಲಿ ಬೆಂಗಾವಲು ಪಡೆಗೆ ದಾರಿ ಗೊತ್ತಿಲ್ಲದೆ ಸುಮಾರು 5 ರಿಂದ 6 ಕಿಲೋಮೀಟರ್ ಸಚಿವರನ್ನ ಸುತ್ತಾಡಿಸಿದ ಘಟನೆ ಇದೇ ವೇಳೆ ನಡೆಯಿತು.
ಇದೇ ವೇಳೆ ದಾರಿ ಸರಿಯಾಗಿ ಗೊತ್ತಿಲ್ಲದೆ ಇರುವ ಅಧಿಕಾರಿಗಳನ್ನು ಯಾಕೆ ಕಳಿಸುತ್ತೀರಾ? ಅಂತ ಸಚಿವರು ಗರಂ ಆಗಿ, ಅಮೃತ ಮಹಲ್ ಕಾವಲು ಎಲ್ಲಿದೆ ಅನ್ನುವುದೇ ತಮಗೆ ಗೊತ್ತಿಲ್ಲ ಎನ್ನುವುದಾದರೆ ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಅಮೃತ ಮಹಲ್ ಕೇಂದ್ರದಲ್ಲಿ ಜಾನುವಾರು ವೀಕ್ಷಿಸಲು ಬಂದ ಸಚಿವರು ಅಧಿಕಾರಿ ಯಡವಟ್ಟಿನಿಂದ ಅಂತೂ ಇಂತೂ ಕೊನೆಗೆ ಮಧ್ಯಾಹ್ನ 12 ಗಂಟೆಗೆ ಬಿದರೆ ಕಾವಲಿಗೆ ಬಂದರು.