ಅರಸೀಕೆರೆ (ಹಾಸನ): ಪ್ರಾಣಿ ಮತ್ತು ಮಾನವ ಸಂಘರ್ಷದಲ್ಲಿ ಚಿರತೆಯೊಂದು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೇಕೆರೆ ಬಳಿ ನಡೆದಿದೆ.
ರಾಜಗೋಪಾಲ್ ನಾಯಕ್ ಎಂಬುವವರು ತಮ್ಮ ದ್ವಿಚಕ್ರ ವಾಹನದಲ್ಲಿ ಪತ್ನಿ ಮತ್ತು ಮಗಳೊಂದಿಗೆ ಅರಸೀಕೆರೆಗೆ ಬರುವಾಗ ಅವರ ವಾಹನಕ್ಕೆ ಚಿರತೆಯೊಂದು ಅಡ್ಡ ಬಂದಿದೆ. ಈ ವೇಳೆ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಮೂರು ಮಂದಿ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಚಿರತೆ ರಾಜಗೋಪಾಲ್ ಮತ್ತು ಕುಟುಂಬದವರ ಮೇಲೆ ದಾಳಿ ಮಾಡಿದೆ. ರಾಜಗೋಪಾಲ್ ಪ್ರತಿದಾಳಿ ಮಾಡಿದ್ದು, ಪ್ರಾಣ ರಕ್ಷಣೆಗಾಗಿ ಚಿರತೆಯನ್ನು ಕೊಂದಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿಯ ಬೋವಿ ಕಾಲೋನಿ ಬಳಿ ತಾಯಿ-ಮಗನ ಮೇಲೆ ಚಿರತೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡಿದ್ರು. ಹೀಗಾಗಿ ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದರು. ಘಟನೆ ನಡೆದ ಅನತಿ ದೂರದಲ್ಲಿಯೇ ಅದೇ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ರಾಜಗೋಪಾಲ್ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಆತ್ಮರಕ್ಷಣೆಗಾಗಿ ಚಿರತೆಯನ್ನು ಸ್ಥಳದಲ್ಲಿಯೇ ಕೊಲ್ಲಬೇಕಾಯ್ತು ಎಂಬುದು ಸ್ಥಳೀಯರ ಮಾತಾಗಿದೆ.
ಮೂರ್ನಾಲ್ಕು ದಿನದ ಹಿಂದೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಕಾಡಾನೆ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಮಲೆನಾಡು ಭಾಗದವರಿಗೆ ಸಮಧಾನ ಮಾಡಿದ್ರು. ಇದ್ರ ಬೆನ್ನಲ್ಲಿಯೇ ಅರಸೀಕೆರೆಯಲ್ಲಿ ಈಗ ಚಿರತೆಗಳ ಹಾವಳಿ ಪ್ರಾರಂಭವಾಗಿದ್ದು, ಮತ್ತೆ ಕಾಡು ಪ್ರಾಣಿ ಹಾಗೂ ನಾಡಿನ ಜನರ ಮಧ್ಯೆ ಸಂಘರ್ಷ ಏರ್ಪಟ್ಟಿದೆ.