ಹಾಸನ: ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ವಯೋವೃದ್ಧನೊಬ್ಬ ನಡುರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ಘಟನೆ ಹಾಸನ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.
ಯಾವುದೋ ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಂದ ಅನಾಮಿಕ ವ್ಯಕ್ತಿ ರೈಲ್ವೆ ಸೇತುವೆ ಪಕ್ಕದ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ ಸ್ಥಳೀಯರು ಈತ ಮದ್ಯಪಾನ ಮಾಡಿದ್ದಾನೆ ಅಂದುಕೊಂಡರು. ಆದರೆ, ಆತನ ಕೈಯಲ್ಲಿ ಆಸ್ಪತ್ರೆಯಲ್ಲಿ ಹಾಕಿದ ಡ್ರಿಪ್ಸ್ ಸಿರಂಜ್ ಇದ್ದಿದ್ದರಿಂದ ಸ್ಥಳೀಯರಲ್ಲಿ ಆತಂಕವೂ ಸೃಷ್ಟಿಯಾಯಿತು.
ನಡುರಸ್ತೆಯಲ್ಲೇ ನಿತ್ರಾಣಗೊಂಡು ಆತ ಬಿದ್ದಿದ್ದರೂ, ಇವರು ಕೊರೊನಾ ರೋಗಿ ಇರಬೇಕು ಎಂದು ಕೆಲಕಾಲ ಭಯಗೊಂಡು ಜನ ವ್ಯಕ್ತಿಯ ಬಳಿ ಹೋಗಲು ಹಿಂಜರಿದರು.
ಹಾಸನ ನಗರದ ಹೊಸ ಬಸ್ ನಿಲ್ದಾಣದ ಹಿಂಭಾಗ ಘಟನೆ ನಡೆದಿದ್ದು, ವಿಷಯ ತಿಳಿದ ಬಳಿಕ ಆ್ಯಂಬುಲೆನ್ಸ್ ಬಂದರೂ ಕೂಡ ರೋಗಿಯನ್ನು ಕೊಂಡೊಯ್ಯಲು ಒಬ್ಬ ಚಾಲಕನಿಗೆ ಸಾಧ್ಯವಾಗಲಿಲ್ಲ. ಆತ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು, ಬಳಿಕ ಸ್ಥಳೀಯ ಹೋಮಿಯೋಪತಿ ವೈದ್ಯರೊಬ್ಬರು ಮಾನವೀಯತೆ ಮೆರೆದು ಪಿಪಿಇ ಕಿಟ್ ಧರಿಸಿ ಸ್ವತಃ ತಾವೇ ಆ ರೋಗಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಆ್ಯಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಕರೆದೊಯ್ದರು.
ಘಟನೆ ನಡೆದ ಒಂದು ಗಂಟೆಯಾದರೂ ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ಬರಲೇ ಇಲ್ಲ. ಹೀಗಾಗಿ ಸ್ಥಳೀಯರು ನಾವು ರೋಗಿಯನ್ನು ವಾಹನಕ್ಕೆ ಕರೆದೊಯ್ಯಲು ಸಹಾಯ ಮಾಡಿದರೆ ನಮ್ಮನ್ನು ಕ್ವಾರಂಟೈನ್ ಮಾಡಬಹುದು ಎಂಬ ಭಯದ ಜೊತೆಗೆ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದು, ಮತ್ತಷ್ಟು ಭಯ ಹಾಗೂ ಆತಂಕವನ್ನು ಸೃಷ್ಟಿ ಮಾಡಿತ್ತು.
ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ಈ ವ್ಯಕ್ತಿಯಿಂದ ಕೇವಲ ಸ್ಥಳೀಯರಲ್ಲಿ ಮಾತ್ರವಲ್ಲದೇ ಆ್ಯಂಬುಲೆನ್ಸ್ ಚಾಲಕನಿಗೂ ಭಯ ಹುಟ್ಟಿದ್ದು, ನಡು ರಸ್ತೆಯಲ್ಲಿಯೇ ನರಳಾಡುತ್ತಿದ್ದ ರೋಗಿಯ ಬಗ್ಗೆ ಆರೋಗ್ಯ ಇಲಾಖೆಯೇ ನಿರ್ಲಕ್ಷ್ಯ ತೋರಿದ್ದು ಮಾತ್ರ ವಿಪರ್ಯಾಸವೇ ಸರಿ.